ತೆರೆದ ವಾಹನಗಳಲ್ಲಿ ಅಪಾಯಕಾರಿಯಾಗಿ ಕಬ್ಬಿಣ ಸಾಗಾಟ

Update: 2018-02-09 05:47 GMT

ಪೊಲೀಸ್ ಹಾಗೂ ಸಾರಿಗೆ ಇಲಾಖೆಯ ನಿರ್ಲಕ್ಷ; ಆರೋಪ

ಮಂಗಳೂರು, ಫೆ.8: ಬೆಂಗಳೂರಿನ ಏರ್‌ಪೋರ್ಟ್ ರಸ್ತೆಯಲ್ಲಿ ಮಂಗಳವಾರ ರಾತ್ರಿ ಅಪಾಯಕಾರಿಯಾಗಿ ಕಬ್ಬಿಣದ ಸರಳುಗಳನ್ನು ಸಾಗಾಟ ಮಾಡುತ್ತಿದ್ದ ಗೂಡ್ಸ್ ಟೆಂಪೊಗೆ ಹಿಂಬದಿಯಲ್ಲಿದ್ದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೊಳಗಾಗುತ್ತಿರುವ ಮಧ್ಯೆಯೇ ಮಂಗಳೂರಿನಲ್ಲೂ ಈ ರೀತಿ ತೆರೆದ ವಾಹನಗಳಲ್ಲಿ ಅಪಾಯಕಾರಿಯಾಗಿ ಕಬ್ಬಿಣ, ಸಿಮೆಂಟ್, ಕಲ್ಲು, ಮರಳು, ಮಣ್ಣು, ಜಲ್ಲಿ, ವಿದ್ಯುತ್ ಕಂಬ ಇತ್ಯಾದಿಗಳ ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದೆ.

ಈ ರೀತಿಯ ಸಾಗಾಟ ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ಅಪರಾಧ ಎಂದು ಸ್ಪಷ್ಟವಾಗಿ ಗೊತ್ತಿದ್ದೂ, ವಾಹನಗಳ ಚಾಲಕ-ಮಾಲಕರು ಇದ್ಯಾವುದನ್ನೂ ಲೆಕ್ಕಿಸದೆ ನಗರದ ಪ್ರಮುಖ ಹಾಗೂ ಒಳರಸ್ತೆಗಳು ಸೇರಿದಂತೆ ವಿವಿಧೆಡೆ ತೆರೆದ ವಾಹನಗಳಲ್ಲೇ ಸಾಗಾಟ ಮಾಡುತ್ತಿದ್ದಾರೆ.

‘ವಾರ್ತಾಭಾರತಿ’ ತಂಡವು ಕಳೆದೊಂದು ವಾರದಲ್ಲಿ ನಗರದ ಬಂದರು,ಹಂಪನಕಟ್ಟೆ, ಪಂಪ್‌ವೆಲ್, ನಂತೂರು, ಬಿಕರ್ನಕಟ್ಟೆ, ಬಂಟ್ಸ್ ಹಾಸ್ಟೆಲ್, ಕಂಕನಾಡಿ ಮತ್ತಿತರ ಕಡೆಗಳಲ್ಲಿ ಸಂಚರಿಸಿ ಸೆರೆಹಿಡಿದ ಚಿತ್ರಗಳು ಸಂಚಾರ ನಿಯಮಗಳ ಉಲ್ಲಂಘನೆಯ ಭೀಕರತೆಯನ್ನು ಸಾರಿ ಹೇಳುತ್ತದೆ.

ಸಾರಿಗೆ ನಿಯಮಗಳ ಪ್ರಕಾರ ತೆರೆದ ವಾಹನಗಳಲ್ಲಿ ಅಪಾಯಕಾರಿಯಾಗಿ ಯಾವುದೇ ಸಾಮಗ್ರಿಗಳನ್ನೂ ಸಾಗಾಟ ಮಾಡುವಂತಿಲ್ಲ. ಪ್ರತಿಯೊಬ್ಬ ಚಾಲಕ ಸಂಚಾರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ ಪರವಾನಿಗೆಯನ್ನು ಕನಿಷ್ಠ 3 ತಿಂಗಳ ಕಾಲ ಅಮಾನತಿನಲ್ಲಿಡಲು ಅವಕಾಶವಿದೆ. ದಂಡ ಕಟ್ಟಿ ಅಮಾನತು ಅವಧಿ ಮುಗಿದ ಬಳಿಕವೂ ಸಂಚಾರ ನಿಯಮ ಉಲ್ಲಂಘನೆಯನ್ನು ಮುಂದುವರಿಸಿದರೆ ಶಾಶ್ವತವಾಗಿ ಪರವಾನಿಗೆಯನ್ನು ರದ್ದು ಮಾಡಬಹುದಾಗಿದೆ. ಮತ್ತೆ ದಂಡ ಕಟ್ಟಲು ಅವಕಾಶವೇ ಇರುವುದಿಲ್ಲ ಎಂಬುದು ರಸ್ತೆ ಸುರಕ್ಷತಾ ಕಾಯ್ದೆ ತಿಳಿಸುತ್ತದೆ.

ವಾಹನದ ಹಿಂದೆ ಅಥವಾ ಮುಂದೆ ಚಲಿಸುವ ವಾಹನಗಳ ಚಾಲಕರು ಅಥವಾ ಪ್ರಯಾಣಿಕರಿಗೆ ತೊಂದರೆಯಾಗುವುದು ಸಹಜ. ಆದ್ದರಿಂದ ಕಬ್ಬಿಣದ ಸರಳುಗಳನ್ನು ಅದರ ಗಾತ್ರಕ್ಕೆ ತಕ್ಕಂತಿರುವ ವಾಹನಗಳಲ್ಲಿ ಸಾಗಾಟ ಮಾಡಬೇಕು. ಹಾಗೇ ಮಾಡುವಾಗ ಸರಳಿನ ತುದಿಗಳಿಗೆ ಅಪಾಯದ ಮುನ್ಸೂಚನೆಯಾಗಿ ಕಪ್ಪು ಹೊರತುಪಡಿಸಿ ಇತರ ಬಣ್ಣದ ಬಟ್ಟೆ ಕಟ್ಟುವ ಅಗತ್ಯವಿದೆ. ಆದರೆ ಬಹುತೇಕ ರಿಕ್ಷಾ, ಟೆಂಪೊ, ಪಿಕ್‌ಅಪ್, ಲಾರಿ, 407 ವಾಹನಗಳಲ್ಲಿ ಹೀಗೆ ಅಪಾಯಕಾರಿಯಾಗಿ ಕಬ್ಬಿಣವನ್ನು ಸಾಗಾಟ ಮಾಡುವಾಗ ಯಾವುದೇ ಬಟ್ಟೆ ಕಟ್ಟುತ್ತಿಲ್ಲ. ಅದೇ ರೀತಿ ಮರಳು, ಸಿಮೆಂಟ್, ಕಲ್ಲು, ಜಲ್ಲಿ ಇತ್ಯಾದಿ ಸರಕು ಸಾಗಾಟ ಮಾಡುವಾಗಲೂ ಅದಕ್ಕೆ ಟರ್ಪಾಲು ಕಟ್ಟಬೇಕು ಎಂಬ ನಿಯಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ. ಆದ್ದರಿಂದ ನಿಯಮ ಉಲ್ಲಂಘನೆಯ ವಿರುದ್ಧ ಪೊಲೀಸ್ ಅಥವಾ ಸಾರಿಗೆ ಇಲಾಖೆಯ ಅಧಿಕಾರಿಗಳು ತುರ್ತು ್ರಮ ಜರುಗಿಸುವ ಅನಿವಾರ್ಯತೆ ಇದೆ.

ಮಂಗಳೂರು ನಗರ ಮಾತ್ರವಲ್ಲದೆ ರಾ.ಹೆದ್ದಾರಿ, ಸುತ್ತಮುತ್ತಲಿನ ಮುಖ್ಯ ರಸ್ತೆಯಲ್ಲೂ ಕೂಡ ಇಂತಹ ಅಪಾಯಕಾರಿ ಸಾಗಾಟ ಪ್ರಕರಣ ಕಂಡು ಬರುತ್ತಿದೆ. ನಗರದೊಳಗಿನ ಜನನಿಬಿಡ ರಸ್ತೆಯಲ್ಲಿ ಹೀಗೆ ಅಪಾಯಕಾರಿಯಾಗಿ ಸರಕು ಸಾಗಾಟ ಮಾಡುವುದರಿಂದ ಸಂಚಾರಕ್ಕೂ ತೊಂದರೆಯಾಗಲಿದೆ. ಅಲ್ಲದೆ ಅತೀ ವೇಗದಿಂದ ಚಲಿಸುವ ವಾಹನವು ಇಂತಹ ಸರಕು ಸಾಗಾಟದ ಬಗ್ಗೆ ಮಾಹಿತಿ ಇಲ್ಲದೆ ಮುನ್ನುಗ್ಗಿದಾಗ ಅಪಘಾತ ಸಂಭವಿಸಿ ಪ್ರಾಣಹಾನಿಯಾಗುವ ಸಾಧ್ಯತೆಯೇ ಹೆಚ್ಚು.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರಕರಣದಂತೆ ನೂರಾರು ನಿದರ್ಶನಗಳು ಅಲ್ಲಲ್ಲಿ ನಡೆಯುತ್ತಿವೆ. 1993ರಲ್ಲಿ ಉಪ್ಪಿನಂಗಡಿಯಲ್ಲಿ ನಡೆದ ಇಂತಹದ್ದೇ ಅಪಘಾತ ಪ್ರಕರಣವೊಂದರಲ್ಲಿ ಎಸ್ಸೈ ಒಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆಯನ್ನು ಪೊಲೀಸ್ ಅಧಿಕಾರಿಯೊಬ್ಬರು ನೆನಪಿಸುತ್ತಾರೆ. ಆದರೆ ಅಪಾಯಕಾರಿಯಾಗಿ ಸರಕುಗಳನ್ನು ಸಾಗಾಟ ಮಾಡುವ ಚಾಲಕರಿಗೆ ಹಾಕುವ ದಂಡ ಕೇವಲ 100 ರೂ. ಮಾತ್ರ. ಆದರೆ ಇದರಿಂದ ಸಂಭವಿಸುವ ಅಪಘಾತಗಳಲ್ಲಿ ಮೃತಪಟ್ಟ ಜೀವಗಳಿಗೆ ಬೆಲೆಯೇ ಇಲ್ಲ ಎಂಬಂತಾಗಿದೆ.

ನಗರದೊಳಗೆ ಹೀಗೆ ಸಂಚರಿಸುವ ವಾಹನಗಳಿಂದ ಸಂಚಾರಕ್ಕೆ ತಡೆಯಾ ದರೆ, ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಂದ ಅಪಘಾತ ಸಂಭವಿಸುವುದು ಸಹಜವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ರುವ ಸುಪ್ರೀಂ ಕೋರ್ಟ್ ಸಾರಿಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶನ ನೀಡಿದೆ. ಅಂದರೆ ರಸ್ತೆ ಅಪಘಾತ ತಡೆಗಟ್ಟಲು ರಸ್ತೆ ಸುರಕ್ಷಾ ಪ್ರಾಧಿಕಾರದ ಮೂಲಕ ರಸ್ತೆ ಸುರಕ್ಷತಾ ಸಮಿತಿ ರಚಿಸಲು ಸೂಚಿಸಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು, ಪೊಲೀಸ್, ಸಾರಿಗೆ, ಲೋಕೋಪಯೋಗಿ, ವಿದ್ಯುತ್ ಮತ್ತಿತರ ಇಲಾಖೆಗಳ ಅಧಿಕಾರಿಗಳು ಇದರ ಸದಸ್ಯರಾಗಿರುತ್ತಾರೆ.

ಸಂಚಾರ ನಿಯಮದ ಪ್ರಕಾರ ವಾಹನ ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡುವಂತಿಲ್ಲ. ಅಮಿತ ವೇಗದಲ್ಲಿ ಚಲಾಯಿಸುವಂತ್ತಿಲ್ಲ, ಮದ್ಯಪಾನ ಮಾಡುವಂತ್ತಿಲ್ಲ, ಮಾನವ ಸಾಗಾಟ ಮಾಡುವಂತ್ತಿಲ್ಲ, ಮಿತಿಮೀರಿ ಸರಕು ಸಾಗಾಟ ಮಾಡುವಂತ್ತಿಲ್ಲ. ಆದರೆ ಮಂಗಳೂರು ನಗರ ಸಹಿತ ಎಲ್ಲೆಡೆ ಇದು ಎಗ್ಗಿಲ್ಲದೆ ನಡೆಯುತ್ತಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಮೌನ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ.

ವಿದ್ಯುತ್ ಇಲಾಖೆಗೆ ಸಂಬಂಧಿಸಿದ ಕಂಬ ಮತ್ತಿತರ ಸಲಕರಣೆಗಳನ್ನು ತೆರೆದ ವಾಹನಗಳಲ್ಲಿ ಸಾಗಿಸುವುದರಿಂದ ಆಗುವ ಅಪಾಯ, ಅನಾಹುತದ ಅರಿವು ಇದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸುವೆವು. ಹಿರಿಯ ಅಧಿಕಾರಿಗಳ ಗಮನ ಸೆಳೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು.

ರಾಜೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರರು

ಮೆಸ್ಕಾಂ, ಮಂಗಳೂರು ವಿಭಾಗ

ಕಾನೂನು ಉಲ್ಲಂಘಿಸಿ ಸರಕುಗಳನ್ನು ಅವೈಜ್ಞಾನಿಕವಾಗಿ ಸಾಗಾಟ ಮಾಡುವುದನ್ನು ತಡೆಗಟ್ಟಲು ಪೊಲೀಸ್ ಮತ್ತು ಸಾರಿಗೆ ಇಲಾಖೆ ವಿಫಲವಾಗಿದೆ. ಈ ಎರಡೂ ಇಲಾಖೆಯ ಅಧಿಕಾರಿಗಳು ಕೇವಲ ದಂಡ ಹಾಕಿ ಬಿಡಬಾರದು. ಕೆಲವು ಚಾಲಕರಿಗೆ ಇದರ ಅಪಾಯದ ಬಗ್ಗೆ ಅರಿವು ಇದೆ. ಇನ್ನು ಕೆಲವರಲ್ಲಿ ನಿರ್ಲಕ್ಷವಿದೆ. ಅಂತವರಿಗೆ ಮನವರಿಕೆ ಮಾಡಿಕೊಡುವ ಕೆಲಸ ಇಲಾಖೆಯ ವತಿಯಿಂದ ಆಗಬೇಕಿದೆ. ಇಲ್ಲದಿದ್ದರೆ ಜುಜುಬಿ ದಂಡ ಪಾವತಿಸಿ ‘ಕೈ’ ತೊಳೆಯುವ ಚಾಳಿ ಜಾಸ್ತಿಯಾಗಬಹುದು. ಹಾಗಾಗಿ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಲು ಮುಕ್ತ ಮನಸ್ಸು ಮಾಡಬೇಕಿದೆ.

ರಿಯಾಝ್ ಅಹ್ಮದ್,

ಪಿಕ್‌ಅಪ್ ಚಾಲಕ, ಮಂಗಳೂರು

ಇದು ಗಂಭೀರ ಸಮಸ್ಯೆಯಾಗಿದೆ. ತೆರೆದ ವಾಹನ ಗಳಲ್ಲಿ ಕಬ್ಬಿಣ ಮತ್ತಿತರ ಸರಕು ಸಾಗಾಟ ಮಾಡುವಾಗ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚು. ಈ ಸಮಸ್ಯೆ ಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಲೇಬೇಕು. ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ತುಡಿತ ನನ್ನಲ್ಲಿದೆ. ಆದರೆ, ಸದ್ಯ ನಮ್ಮಲ್ಲಿ ನಿರೀಕ್ಷಕರ ಕೊರತೆ ಇದೆ. ಆದಾಗ್ಯೂ ವಿಶೇಷ ತಂಡವೊಂದನ್ನು ರಚಿಸಿ ಇಂತಹ ಅಪಾಯಕಾರಿ ಸಾಗಾಟಕ್ಕೆ ಕಡಿವಾಣ ಹಾಕಲಾಗುವುದು.

ಜಿ.ಎಸ್.ಹೆಗಡೆ, ಉಪ ಆಯುಕ್ತರು (ಪ್ರಭಾರ)

ಸಾರಿಗೆ ಇಲಾಖೆ, ಮಂಗಳೂರು

ತೆರೆದ ವಾಹನಗಳಲ್ಲಿ ಕಬ್ಬಿಣ ಮತ್ತಿತರ ಸರಕು ಗಳನ್ನು ಸಾಗಾಟ ಮಾಡುವ ಪ್ರಕರಣದ ಬಗ್ಗೆ ನಿರ್ದಿಷ್ಟ ದೂರುಗಳು ಬಂದಿಲ್ಲ. ಆದರೆ, ನಾವು ಅದರ ವಿರುದ್ಧ ಕ್ರಮ ಜರುಗಿಸುತ್ತಲಿದ್ದೇವೆ. ಇದರಿಂದಾಗುವ ಅಪಾಯದ ಅರಿವು ಇರುವ ಕಾರಣ ಶೀಘ್ರ ಕಾರ್ಯಾಚರಣೆ ಆರಂಭಿಸಿ ಕಟ್ಟುನಿಟ್ಟಾಗಿ ತಡೆಹಿಡಿಯುವೆವು. ಇನ್ನು ಪೊಲೀಸರ ಕಣ್ತಪ್ಪಿಸಿದರೂ ಸಿಸಿಟಿವಿ ಕ್ಯಾಮರಾದ ಸಹಾಯದಿಂದ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕ್ರಮ ಜರುಗಿಸುವೆವು.

ಎಂ. ಮಂಜುನಾಥ್ ಶೆಟ್ಟಿ,ಪೊಲೀಸ್ ಸಹಾಯಕ ಆಯುಕ್ತರು

ಮಂಗಳೂರು ಸಂಚಾರ ಉಪವಿಭಾಗ

ಮಂಗಳೂರು ನಗರದಲ್ಲಿ ಸಂಚಾರದ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರ ಮಧ್ಯೆ ರಿಕ್ಷಾ, ಟೆಂಪೋ, ಪಿಕ್‌ಅಪ್, ಲಾರಿಗಳಲ್ಲಿ ಕಬ್ಬಿಣದ ಸರಳುಗಳನ್ನು ಸಾಗಿಸುವಾಗಲೂ ಟ್ರಾಫಿಕ್ ಜಾಮ್ ಆಗುವುದು ಸಾಮಾನ್ಯವಾಗಿದೆ. ಪ್ರಯಾಣಿಕರನ್ನು ಸಾಗಿಸಬೇಕಾದ ರಿಕ್ಷಾದಲ್ಲಿ ಸರಳುಗಳನ್ನು ಸಾಗಿಸುತ್ತಿದ್ದರೂ ಪೊಲೀಸರು ಕ್ರಮ ಜರುಗಿಸುವುದಿಲ್ಲ. ಕೆಲವು ವಾಹನಗಳಲ್ಲಿ ಈ ಸರಳುಗಳು ರಸ್ತೆಗೆ ತಾಗಿಕೊಂಡಿರುತ್ತದೆ. ಭಾರವೂ ಮಿತಿಮೀರಿರುತ್ತದೆ. ಹೀಗಿರು ವಾಗಲೇ ಇಂತಹ ವಾಹನಗಳ ಹಿಂದೆ ಅಥವಾ ಆಸುಪಾಸು ಸಂಚರಿಸಲು ಭಯವಾಗುತ್ತಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಶ್ವೇತಾ ಶೆಟ್ಟಿ

ಖಾಸಗಿ ಸಂಸ್ಥೆಯ ಉದ್ಯೋಗಿ, ಮಂಗಳೂರು

ಸಂಚಾರ ಪೊಲೀಸರು ಅಥವಾ ಆರ್‌ಟಿಒ ಅಧಿಕಾರಿಗಳು ಎಲ್‌ಪಿಜಿ ಟ್ಯಾಂಕರ್‌ಗಳನ್ನು ನಿಲ್ಲಿಸಿ ಕೇಸು ಜಡಿಯುತ್ತಾರೆಯೇ ವಿನಃ ಇಂತಹ ಅಪಾಯಕಾರಿ ಸರಕು ಸಾಗಾಟದ ವಿರುದ್ಧ ಕ್ರಮ ಜರುಗಿಸುತ್ತಿಲ್ಲ. ಕಂಟೇನರ್‌ಗಳಲ್ಲಿ ಪೈಪ್‌ಗಳನ್ನು ಸಾಗಾಟ ಮಾಡಲಾಗುತ್ತಿದೆ. ಟರ್ಪಾಲು ಮುಚ್ಚದೆ ಲಾರಿ-ಟಿಪ್ಪರ್‌ಗಳಲ್ಲೂ ಮಣ್ಣು ಸಾಗಾಟ ಮಾಡಲಾಗುತ್ತಿವೆ. ಇದರ ಧೂಳು ಅಪಾಯಕಾರಿ. ಶಾಲಾ ಮಕ್ಕಳಿಗೆ ಇದರ ಅಪಾಯದ ಅರಿವು ಇಲ್ಲದೆ ಸುಲಭವಾಗಿ ಕಣ್ಣಿಗೆ ಹಾನಿ ಮಾಡಿಕೊಳ್ಳುತ್ತಿದ್ದಾರೆ. ಪೊಲೀಸರು, ಸಾರಿಗೆ ಅಧಿಕಾರಿಗಳು ಕ್ರಮ ಜರುಗಿಸದಿದ್ದರೆ ನಮ್ಮ ಸಂಘಟನೆಯು ಇದರ ವಿರುದ್ಧ ಆಂದೋಲನ ಮಾಡಲಿದೆ.

 ಬಿ.ಕೆ. ಇಮ್ತಿಯಾಝ್

ಅಧ್ಯಕ್ಷರು, ಡಿವೈಎಫ್‌ಐ ದ.ಕ. ಜಿಲ್ಲೆ

ಚಿತ್ರಗಳು: ಸುಹೈಲ್ ಬಜಾಲ್

Writer - ವರದಿ : ಹಂಝ ಮಲಾರ್

contributor

Editor - ವರದಿ : ಹಂಝ ಮಲಾರ್

contributor

Similar News