ದೇವಸ್ಥಾನಗಳಲ್ಲಿ ಪುರುಷರನ್ನೂ ಬ್ರಹ್ಮಚರ್ಯ ಪರೀಕ್ಷೆಗೆ ಒಳಪಡಿಸಿ: ಟ್ವಿಂಕಲ್ ಖನ್ನಾ
ಹೊಸದಿಲ್ಲಿ, ಫೆ.9: ಶಬರಿಮಲೆ ದೇವಸ್ಥಾನಕ್ಕೆ ಋತುಚಕ್ರವಾಗುವ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಟಿ-ಲೇಖಕಿ ಟ್ವಿಂಕಲ್ ಖನ್ನಾ, ದೇವಸ್ಥಾನಗಳಲ್ಲಿ ಪುರುಷರನ್ನೂ ಬ್ರಹ್ಮಚರ್ಯ ಪರೀಕ್ಷೆಗೆ ಒಳಪಡಿಸಬೇಕು ಎಂದು ತಿಳಿಸಿದ್ದಾರೆ.
ಧಾರ್ಮಿಕ ಕ್ಷೇತ್ರಗಳಿಗೆ ಋತುಮತಿಯಾದ ಮಹಿಳೆಯರು ಪ್ರವೇಶಿಸುವುದು ನಿಷಿದ್ಧವಾದರೆ ಪುರುಷರ ಬ್ರಹ್ಮಚರ್ಯವನ್ನು ಪರಿಶೀಲಿಸುವ ಯಂತ್ರವನ್ನು ಕೂಡಾ ದೇವಸ್ಥಾನಗಳಲ್ಲಿ ಇಡಬೇಕು ಎಂದು ಖನ್ನಾ ತಾಕೀತು ಮಾಡಿದ್ದಾರೆ. ಕಾನೂನು ಎಂಬುದು ಎಲ್ಲರಿಗೂ ಒಂದೇ ಆಗಿರಬೇಕು ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ನಿಯಮಗಳನ್ನು ಮಾಡಬಾರದು ಎಂದವರು ತಿಳಿಸಿದ್ದಾರೆ.
ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಶಬರಿಮಲೆ ದೇವಸ್ಥಾನಕ್ಕೆ ಋತುಚಕ್ರವಾಗುವ ಮಹಿಳೆಯರ ಪ್ರವೇಶವನ್ನು ನಿಷೇಧಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಟ್ವಿಂಕಲ್ ಈ ರೀತಿಯಾಗಿ ಉತ್ತರಿಸಿದ್ದಾರೆ. ಇದೇ ವೇಳೆ, ಇದರರ್ಥ ಪುರುಷರು ನಮ್ಮ ವಿರುದ್ಧವಿದ್ದಾರೆ ಎಂಬುದಲ್ಲ. ಬದಲಾಗಿ ಮಹಿಳೆಯರೇ ತಮ್ಮ ಬಗ್ಗೆ ಸಂಕುಚಿತ ಮನಸ್ಸನ್ನು ಹೊಂದಿದ್ದಾರೆ. ಋತುಮತಿಯಾದ ಬಗ್ಗೆ ಅವರು ಹೇಳಲು ಹಿಂಜರಿಯುತ್ತಾರೆ ಎಂದು ಖನ್ನಾ ವಿವರಣೆ ನೀಡಿದ್ದಾರೆ.
ಖನ್ನಾ ಮಾತನ್ನು ವಿರೋಧಿಸಿರುವ ಸಾಮಾಜಿಕ ಹೋರಾಟಗಾರ ರಂಜಿತ್ ಕೇಶವ್, ನಾನು ಸಮಾನ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದೇನೆ. ಆದರೆ ಟ್ವಿಂಕಲ್ ಖನ್ನಾ ಮಾತಿಗೆ ನನ್ನ ಅಸಮ್ಮತಿಯಿದೆ. ಓರ್ವ ನೈಜ ಹಿಂದೂ ಮಹಿಳೆ ಯಾವುದೇ ಕಾರಣಕ್ಕೂ ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸುವುದಿಲ್ಲ. ಆಕೆಗೆ ನಿಷೇಧವಿದೆ ಎಂಬ ಕಾರಣದಿಂದ ಅಲ್ಲ, ಬದಲಿಗೆ ಅದು ಆಕೆಯ ನಂಬಿಕೆಯ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.