ಪೀಠಗಳ ಸದಸ್ಯರ ನೇಮಕ ನಿಯಮಗಳಲ್ಲಿ ಯಥಾಸ್ಥಿತಿ ಉಳಿಸಿಕೊಂಡ ಸರ್ವೋಚ್ಚ ನ್ಯಾಯಾಲಯ
ಹೊಸದಿಲ್ಲಿ, ಫೆ.9: ಎಲ್ಲಾ ಪೀಠಗಳಿಗೆ ಸದಸ್ಯರ ನೇಮಕವನ್ನು ಸದ್ಯಕ್ಕೆ ಈ ಹಿಂದಿನ ನಿಯಮಗಳಂತೆಯೇ ನಡೆಸಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರದಂದು ತಿಳಿಸಿದೆ.
ಪೀಠಗಳ ಸದಸ್ಯರ ನೇಮಕ ಮತ್ತು ಸರಕಾರದಲ್ಲಿ ಅವರ ಅವಧಿಯನ್ನು ನಿರ್ಧರಿಸುವ ವಿತ್ತ ಕಾಯ್ದೆ, 2017-18ರ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ಬಗ್ಗೆ ವಿಚಾರಣೆ ನಡೆಸಿ ತೀರ್ಪು ನೀಡುವವರೆಗೆ ಮಧ್ಯಂತರ ವ್ಯವಸ್ಥೆಯು ಜಾರಿಯಲ್ಲಿರಲಿದೆ ಎಂದು ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಹಾಗೂ ನ್ಯಾಯಾಧೀಶರಾದ ಎ.ಎಂ ಖಾನ್ವಿಲ್ಕರ್ ಮತ್ತು ಡಿ.ವೈ ಚಂದ್ರಚೂಡ್ ಅವರನ್ನೊಳಗೊಂಡ ಪೀಠವು ತಿಳಿಸಿತು.
ಹಿಂದಿನ ನಿಯಮದ ಪ್ರಕಾರ, ಭಾರತದ ಮುಖ್ಯ ನ್ಯಾಯಾಧೀಶರಿಂದ ನಾಮನಿರ್ದೇಶಿತರು, ಸರಕಾರದ ಇಬ್ಬರು ಕಾರ್ಯದರ್ಶಿಗಳು ಹಾಗೂ ಮತ್ತು ನೇಮನ ನಡೆಸಲು ಉದ್ದೇಶಿಸಲಾಗಿರುವ ಪೀಠದ ಮುಖ್ಯಸ್ಥರನ್ನು ಹೊಂದಿರುವ ಸಮಿತಿಯು ಪೀಠಗಳಿಗೆ ಸದಸ್ಯರನ್ನು ನೇಮಕ ಮಾಡುತ್ತಾರೆ. ವಿತ್ತ ಕಾಯ್ದೆಯ ಅಡಿಯಲ್ಲಿ, ಪೀಠಗಳನ್ನು ವಿಲೀನಗೊಳಿಸುವ ಮತ್ತ ಅವುಗಳಿಗೆ ಸದಸ್ಯರನ್ನು ನೇಮಕ ಮಾಡುವ ಅಧಿಕಾರವು ಸರಕಾರದ ಬಳಿಯಿರುವುದರಿಂದ ಈ ವಿಷಯದಲ್ಲಿ ಭಾರತೀಯ ಮುಖ್ಯ ನ್ಯಾಯಾಧೀಶರ ಅಧಿಕಾರವನ್ನು ಕಸಿದಂತಾಗುವುದಿಲ್ಲವೇ ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ. 2017ರ ವಿತ್ತ ಕಾಯ್ದೆಯ ಮೂಲಕ ಸರಕಾರ ತಂದಿರುವ ನಿಬಂಧನೆಯು ಅಧಿಕಾರ ಮತ್ತು ಸ್ವತಂತ್ರ ನ್ಯಾಯಾಂಗ ತತ್ವಗಳ ಪತ್ಯೇಕತೆಯ ಸಿದ್ಧಾಂತವನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.