ದ್ವಿತೀಯ ಟೆಸ್ಟ್: ಸುಸ್ಥಿತಿಯಲ್ಲಿ ಶ್ರೀಲಂಕಾ

Update: 2018-02-09 18:31 GMT

ಕೊಲಂಬೊ, ಫೆ.9: ರೋಶನ್ ಸಿಲ್ವಾ ಬಾರಿಸಿದ ಅರ್ಧಶತಕದ(ಔಟಾಗದೆ 58) ನೆರವಿನಿಂದ ಶ್ರೀಲಂಕಾ ತಂಡ ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಸುಸ್ಥಿತಿಯಲ್ಲಿದೆ.

ಎರಡನೇ ದಿನವಾದ ಶುಕ್ರವಾರ ದ್ವಿತೀಯ ಇನಿಂಗ್ಸ್ ನಲ್ಲಿ ಶ್ರೀಲಂಕಾ ತಂಡ 8 ವಿಕೆಟ್‌ಗಳ ನಷ್ಟಕ್ಕೆ 200 ರನ್ ಗಳಿಸಿದೆ. ಒಟ್ಟಾರೆ 312 ರನ್ ಮುನ್ನಡೆಯಲ್ಲಿದೆ.

  4 ವಿಕೆಟ್ ನಷ್ಟಕ್ಕೆ 54 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಆತಿಥೇಯ ಬಾಂಗ್ಲಾದೇಶ ಧನಂಜಯ(3-20) ಹಾಗೂ ಪೆರೇರ(2-32) ದಾಳಿಗೆ ಸಿಲುಕಿ ಮೊದಲ ಇನಿಂಗ್ಸ್‌ನಲ್ಲಿ 110 ರನ್‌ಗೆ ಆಲೌಟಾಯಿತು. ಲಕ್ಮಲ್(3-25) ಮೊದಲ ದಿನವಾದ ಗುರುವಾರ ಬಾಂಗ್ಲಾದೇಶದ 3 ವಿಕೆಟ್‌ಗಳನ್ನು ಉಡಾಯಿಸಿ ಆಘಾತ ನೀಡಿದ್ದರು. ಬಾಂಗ್ಲಾದ ಪರ ನೈಟ್‌ವಾಚ್‌ಮ್ಯಾನ್ ಮೆಹದಿ ಹಸನ್(38) ಅಗ್ರ ಸ್ಕೋರರ್ ಎನಿಸಿಕೊಂಡರು. ಚೊಚ್ಚಲ ಟೆಸ್ಟ್ ಪಂದ್ಯ ಆಡಿದ 24ರ ಹರೆಯದ ಧನಂಜಯ ಲೆಗ್ ಸ್ಪಿನ್ ಗೂಗ್ಲಿ ಹಾಗೂ ಕೇರಂ ಎಸೆತಗಳ ಮೂಲಕ ಬಾಂಗ್ಲಾದ ಮಧ್ಯಮ ಕ್ರಮಾಂಕಕ್ಕೆ ಸವಾಲಾದರು. ಮಹಮ್ಮದುಲ್ಲಾ(17)ರನ್ನು ಕ್ಲೀನ್‌ಬೌಲ್ಡ್ ಮಾಡಿದ ಧನಂಜಯ ಅವರು ಶಬ್ಬೀರ್ರಹ್ಮಾನ್(0) ಹಾಗೂ ರಝಾಕ್‌ರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಎರಡನೇ ಇನಿಂಗ್ಸ್ ಆರಂಭಿಸಿರುವ ಲಂಕಾ ತಂಡಕ್ಕೆ ಆಸರೆಯಾದ ಸಿಲ್ವಾ ತನ್ನ 5ನೇ ಪಂದ್ಯದಲ್ಲಿ 2ನೇ ಅರ್ಧಶತಕ ಸಿಡಿಸಿದರು. ಸಿಲ್ವಾಗೆ ಸುರಂಗ ಲಕ್ಮಲ್(7) ಸಾಥ್ ನೀಡುತ್ತಿದ್ದಾರೆ.

ಬಾಂಗ್ಲಾದ ಪರ ಮುಸ್ತಫಿಝುರ್ರಹ್ಮಾನ್(3-25) ಮೂರು ವಿಕೆಟ್‌ಗಳನ್ನು ಕಬಳಿಸಿದರೆ, ಸ್ಪಿನ್ನರ್‌ಗಳಾದ ತೈಜುಲ್ ಇಸ್ಲಾಂ(2-72) ಹಾಗೂ ಮೆಹೆದಿ ಹಸನ್ ಮಿರಾಝ್(2-29) ತಲಾ 2 ವಿಕೆಟ್‌ಗಳನ್ನು ಉರುಳಿಸಿದರು.

ಎಡಗೈ ಆರಂಭಿಕ ಆಟಗಾರ ಡಿ.ಕರುಣರತ್ನೆ(32) ಹಾಗೂ ಧನಂಜಯ ಡಿಸಿಲ್ವಾ(28)ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಶ್ರೀಲಂಕಾ ತಂಡ 92 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಕುಸಿತದ ಹಾದಿಯಲ್ಲಿತ್ತು. ಆಗ ನಾಯಕ ದಿನೇಶ್ ಚಾಂಡಿಮಾಲ್(30)ರೊಂದಿಗೆ 5ನೇ ವಿಕೆಟ್‌ಗೆ 51 ರನ್ ಜೊತೆಯಾಟ ನಡೆಸಿದ ಸಿಲ್ವಾ ತಂಡವನ್ನು ಆಧರಿಸಿದರು. ವಿಕೆಟ್‌ಕೀಪರ್ ಡಿಕ್ವೆಲ್ಲಾ ಕೇವಲ 10 ರನ್ ಗಳಿಸಿ ಔಟಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News