ಪ್ಯಾಡ್ ಮ್ಯಾನ್ : ಈಗ ನಮ್ಮ ದೇಶಕ್ಕೆ ಬೇಕಾದ ನಿಜವಾದ ಸೂಪರ್ ಮ್ಯಾನ್

Update: 2018-02-10 05:46 GMT

‘ಔರತೋಂ ಕೆ ಲಿಯೆ ಸಬ್ಸೆ ಬಡಿ ಬೀಮಾರಿ ಹೈ ಶರಮ್' ( ಮಹಿಳೆಯರನ್ನು ಕಾಡುವ ಅತಿ ದೊಡ್ಡ ರೋಗವೆಂದರೆ ನಾಚಿಕೆ)  ಅಕ್ಷಯ್ ಕುಮಾರ್ ಅಭಿನಯದ  ‘ಪ್ಯಾಡ್ ಮ್ಯಾನ್'  ಚಿತ್ರದಲ್ಲಿ ಕೇಳಿ ಬರುವ ಈ ಮಾತು ಅಕ್ಷರಶಃ ನಿಜ. ಮಹಿಳೆಯರು ಯಾವತ್ತೂ ಕಳಚಲು  ಸಾಧ್ಯವೇ ಇಲ್ಲದಂತಹ ಪರದೆಯ ಅಡಿಯಲ್ಲಿರಬೇಕಾದಂತಹ ಒತ್ತಡದಲ್ಲಿರುವುದನ್ನು ಇದು ಸೂಚಿಸುತ್ತದೆ. ಆದರೆ  ತಮ್ಮ 'ಪ್ಯಾಡ್ ಮ್ಯಾನ್' ಮೂಲಕ ನಿರ್ದೇಶಕ ಆರ್ ಬಲ್ಕಿ ಸಮಾಜಕ್ಕೆ ಈ ಸಂದೇಶ ನೀಡಲು ಬಯಸುತ್ತಿಲ್ಲವೆಂಬುದು ಸ್ತುತ್ಯಾರ್ಹ.

ಸಾಮಾಜಿಕ ಕಾರ್ಯಕರ್ತ ಅರುಣಾಚಲಂ ಮುರುಗನಾಥಂ ಜೀವನ ವೃತ್ತಾಂತವನ್ನು ಬಿಂಬಿಸುವ 'ಪ್ಯಾಡ್ ಮ್ಯಾನ್' ದೇಶದ ವಿವಿಧೆಡೆಗಳಲ್ಲಿ ಈ ಆಧುನಿಕ ಕಾಲದಲ್ಲಿಯೂ ಮುಟ್ಟಿನ ಬಗ್ಗೆ ಇರುವ ಅಂಧಶ್ರದ್ಧೆಗಳನ್ನು, ಗೌಪ್ಯತೆ ಹಾಗೂ ತಪ್ಪು ಅಭಿಪ್ರಾಯಗಳನ್ನು ಹೋಗಲಾಡಿಸುವ ಪ್ರಯತ್ನ ನಡೆಸಿದೆ. ತಮ್ಮ ಚಿತ್ರದಲ್ಲಿ ಬಲ್ಕಿ ನೇರವಾಗಿ ತಾವು ಹೇಳಬೇಕಾದ ಅಂಶದತ್ತವೇ  ಬರುತ್ತಾರೆ. ಲಕ್ಷ್ಮೀಕಾಂತ್ (ಅಕ್ಷಯ್ ಕುಮಾರ್) ಒಬ್ಬ ಒಳ್ಳೆಯ ಪತಿಯಾಗಿದ್ದು ತನ್ನ  ಪತ್ನಿ ಗಾಯತ್ರಿ (ರಾಧಿಕಾ ಆಪ್ಟೆ) ಯಾವುದೇ ರೀತಿಯ ತೊಂದರೆಯೆದುರಿಸದಂತೆ  ನೋಡಿಕೊಳ್ಳುತ್ತಾನೆ. ಆಕೆ ಕಷ್ಟವನ್ನನುಭವಿಸದೇ ಇರುವುದಕ್ಕೆ ಆತ ಯಾವುದೇ ಮಟ್ಟಕ್ಕೂ ಹೋಗಲು ಸಿದ್ಧನಿರುತ್ತಾನೆ.

ಆದರೆ   ತಿಂಗಳ 'ಆ ದಿನಗಳಲ್ಲಿ' ತನ್ನ ಪತ್ನಿಯನ್ನು ಮನೆಯಿಂದ  ಆಚೆಗೆ ಇಡಲಾಗುತ್ತಿರುವುದನ್ನು  ಹಾಗೂ ಆಕೆ ಕೊಳೆ ಬಟ್ಟೆಗಳನ್ನು  ಉಪಯೋಗಿಸುವುದನ್ನು ಆತ ನೋಡಿದಾಗ ಕಳವಳಗೊಳ್ಳುತ್ತಾನೆ. ಆಕೆ ಇಂತಹ ಕಷ್ಟಗಳನ್ನು ಅನುಭವಿಸದೇ ಇರಲಿ ಎಂದು ಆಕೆಗೆ ಉಪಯೋಗಿಸಿದ ನಂತರ ಬಿಸಾಡಬಹುದಾದಂತಹ ಸ್ಯಾನಿಟರಿ ನ್ಯಾಪ್ ಕಿನ್ ಖರೀದಿಸಿ  ತರುತ್ತಾನೆ. ಆದರೆ ಅದು ದುಬಾರಿಯೆಂದು ತಿಳಿದಾಗ ಅದನ್ನು  ಉಪಯೋಗಿಸುವುದಕ್ಕೆ ಆಕೆ ವಿರೋಧ ವ್ಯಕ್ತಪಡಿಸುತ್ತಾಳೆ.  ಮುಂದೆ ಲಕ್ಷ್ಮಿಕಾಂತ್ ಜೀವನದ ಸ್ಫೂರ್ತಿದಾಯಕ ಪಯಣ ಆರಂಭಗೊಳ್ಳುತ್ತದೆ.

ಚಿತ್ರ ನಿರ್ದೇಶಕ ಬಲ್ಕಿ ಹಾಗೂ ಚಿತ್ರಕಥಾಕಾರ ಸ್ವಾನಂದ್ ಕಿರ್ಕಿರೆ  ಚಿತ್ರದಲ್ಲಿ ನವಿರಾದ ಹಾಸ್ಯ ಉಪಯೋಗಿಸಿ ಮಾತುಗಳಲ್ಲಿ ಹೇಳಲಾರದ್ದನ್ನು  ಹೇಳುವ ಪ್ರಯತ್ನ  ನಡೆಸಿದ್ದು ಪ್ರಶಂಸಾರ್ಹ. ಆದರೆ ಚಿತ್ರದಲ್ಲಿ ಒಂದೇ ವಿಷಯ ಮತ್ತೆ ಮತ್ತೆ ಮರುಕಳಿಸುತ್ತದೆಯಾದರೂ  ಬದಲಾವಣೆ ಅಷ್ಟು ಸುಲಭ ಕಾರ್ಯವಲ್ಲವೆಂಬುದನ್ನು ಅದು ಸೂಚಿಸುತ್ತದೆ.

ಮುರುಗನಾಥಮ್ ಕೊಯಂಬತ್ತೂರು ಮೂಲದವನಾಗಿದ್ದರೆ ಈ ಚಿತ್ರದ ಕಥಾ ನಾಯಕ ಭಾರತದ ಪ್ರಮುಖ ಪ್ರದೇಶದವನಾಗಿರುತ್ತಾನೆ. ಮುಟ್ಟಿನ ಬಗ್ಗೆ ಮೌನ ವಹಿಸುವ ಬದಲು ಆತ  ಇಲ್ಲಿಯ ತನಕ ನಿಷಿದ್ಧವಾಗಿದ್ದ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾನೆ. ಚಿತ್ರದ ಪ್ರಥಮಾರ್ಧದಲ್ಲಿ ರಾಧಿಕಾ ಆಪ್ಟೆ ಹಾಗೂ ದ್ವಿತೀಯಾರ್ಧದಲ್ಲಿ ಪರಿ (ಸೋನಮ್ ಕಪೂರ್) ಬೆಂಬಲದೊಂದಿಗೆ ಚಿತ್ರದುದ್ದಕ್ಕೂ ಅಕ್ಷಯ್ ಮಿಂಚುತ್ತಾರೆ.

ಅಮಿತ್ ತ್ರಿವೇದಿ ಅವರ ಸಂಗೀತ ಮನಮುಟ್ಟುತ್ತದೆ. ಅಕ್ಷಯ್ ಕುಮಾರ್ ಅವರನ್ನು 'ಪ್ಯಾಡ್ ಮ್ಯಾನ್' ಮೂಲಕ ಸೂಪರ್ ಹೀರೋ ಆಗಿಸಿದ  ನಿರ್ದೇಶಕ ಆರ್ ಬಲ್ಕಿ ಅವರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News