×
Ad

ಫೆಲೆಸ್ತೀನ್ ಅತೀ ಶೀಘ್ರ ಸ್ವತಂತ್ರ ದೇಶವಾಗಲಿದೆ: ಮೋದಿ

Update: 2018-02-10 19:32 IST

ಹೊಸದಿಲ್ಲಿ, ಫೆ.10: ಫೆಲೆಸ್ತೀನ್ ಅತೀ ಶೀಘ್ರದಲ್ಲಿ ಅತ್ಯಂತ ಶಾಂತಿಯುತ ರೀತಿಯಲ್ಲಿ ಸ್ವತಂತ್ರ ದೇಶವಾಗಲಿದೆ ಎಂಬ ವಿಶ್ವಾಸ ಭಾರತಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೂರು ದೇಶಗಳ ಪ್ರವಾಸದ ಅಂಗವಾಗಿ ಶನಿವಾರ ಫೆಲೆಸ್ತಿನ್‌ನ ರಮಲ್ಲಾಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಫೆಲೆಸ್ತೀನ್‌ನ ಪ್ರಾದೇಶಿಕ ಸ್ಥಿರತೆಗೆ ರಾಜತಾಂತ್ರಿಕ ಕ್ರಮ ಅತ್ಯಂತ ಸೂಕ್ತ ಕ್ರಮ ಎಂದು ಹೇಳಿದರು.

ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿ ಪ್ರಕ್ರಿಯೆಯಲ್ಲಿ ಮೋದಿ ವಹಿಸಿದ ಪಾತ್ರವನ್ನು ಗೌರವಿಸುವ ಸಲುವಾಗಿ ಅವರಿಗೆ ಅಧ್ಯಕ್ಷ ಮಹಮೂದ್ ಅಬ್ಬಾಸ್ ‘ಗ್ರಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಪ್ ಫೆಲೆಸ್ತೀನ್’ ಗೌರವ ಪ್ರದಾನ ಮಾಡಿದರು.

ಮೋದಿ ಫೆಲೆಸ್ತೀನ್‌ಗೆ ಭೇಟಿ ನೀಡಿರುವ ಪ್ರಪ್ರಥಮ ಭಾರತೀಯ ಪ್ರಧಾನಿಯಾಗಿದ್ದಾರೆ. ತನಗೆ ದೊರೆತ ಗೌರವ ಭಾರತಕ್ಕೆ ದೊರೆತ ಗೌರವವಾಗಿದ್ದು ಫೆಲೆಸ್ತೀನ್‌ನ ಗೆಳೆತನದ ಸಂಕೇತವಾಗಿದೆ ಎಂದ ಮೋದಿ, ಫೆಲೆಸ್ತೀನ್‌ನ ಜನರ ಹಿತಾಸಕ್ತಿಯತ್ತ ಭಾರತ ಗಮನ ನೀಡುತ್ತದೆ. ಅತೀ ಶೀಘ್ರವೇ ಅತ್ಯಂತ ಶಾಂತ ರೀತಿಯಲ್ಲಿ ಈ ದೇಶ ಸ್ವತಂತ್ರ ರಾಷ್ಟ್ರವಾಗಲಿದೆ ಎಂದು ಭಾರತ ಆಶಿಸುತ್ತದೆ . ಪ್ರಾದೇಶಿಕ ಸ್ಥಿರತೆ ಹಾಗೂ ಶಾಂತಿ ಕಾಪಾಡಲು ರಾಜತಾಂತ್ರಿಕ ಕ್ರಮ ಸರಿಯಾದ ರೀತಿಯೆಂದು ಭಾರತ ನಂಬಿದೆ ಎಂದು ಹೇಳಿದರು.

ಫೆಲೆಸ್ತೀನ್‌ನಲ್ಲಿ ಸ್ಥಿರತೆ ಹಾಗೂ ಶಾಂತಿ ನೆಲೆಸುವ ವಿಶ್ವಾಸವಿದೆ. ಮಾತುಕತೆಯ ಮೂಲಕ ಶಾಶ್ವತ ಪರಿಹಾರ ಸಾಧ್ಯ. ಹಿಂಸಾಚಾರದಿಂದ ಮುಕ್ತವಾಗಲು ದೂರದೃಷ್ಟಿತ್ವ ಹಾಗೂ ರಾಜತಾಂತ್ರಿಕ ಉಪಕ್ರಮಗಳ ಅಗತ್ಯವಿದೆ. ಅದು ಹೇಳಿದಷ್ಟು ಸುಲಭವಲ್ಲ ಎಂಬುದೂ ನಮಗೆ ತಿಳಿದಿದೆ. ಆದರೆ ನಾವು ಪ್ರಯತ್ನ ಮುಂದುವರಿಸುವ ಅಗತ್ಯವಿದೆ ಎಂದು ಹೇಳಿದರು. ಭಾರತ- ಫೆಲೆಸ್ತೀನ್ ನಡುವಿನ ಬಾಂಧವ್ಯ ಸುದೀರ್ಘ ಕಾಲದಿಂದ ಸಾಗಿ ಬಂದಿದೆ. ಭಾರತದ ವಿದೇಶ ವ್ಯವಹಾರ ಕಾರ್ಯ ನೀತಿಯಲ್ಲಿ ಫೆಲೆಸ್ತೀನ್ ಕುರಿತ ವಿಷಯಕ್ಕೆ ಯಾವತ್ತೂ ಪ್ರಮುಖ ಆದ್ಯತೆ ನೀಡಲಾಗುತ್ತಿದೆ . ಅತ್ಯಂತ ಕಠಿಣ ಸಂದರ್ಭಗಳಲ್ಲೂ , ಅಸ್ಥಿರ ಪರಿಸ್ಥಿತಿಯಲ್ಲೂ ಫೆಲೆಸ್ತೀನ್‌ನ ಜನತೆ ಪ್ರದರ್ಶಿಸಿರುವ ಧೈರ್ಯ, ಸಾಹಸ ಆದರ್ಶಪ್ರಾಯವಾಗಿದೆ. ಕಠಿಣ ಪರಿಸ್ಥಿತಿಯಲ್ಲೂ ಎದೆಗುಂದದೆ ಮುಂದೆ ಸಾಗಿರುವ ಫೆಲೆಸ್ತೀನ್ ಜನರ ಸಾಹಸ ಶ್ಲಾಘನಾರ್ಹವಾಗಿದೆ ಎಂದರು.

  ಫೆಲೆಸ್ತೀನ್ ರಾಷ್ಟ್ರದ ಅಭಿವೃದ್ಧಿ ಕಾರ್ಯ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಹಾಗೂ ಪ್ರಾದೇಶಿಕ ಸ್ಥಿರತೆ ಕಾಯ್ದುಕೊಳ್ಳುವ ಪ್ರಕ್ರಿಯೆಯಲ್ಲಿ ಭಾರತವು ಸಹಭಾಗಿತ್ವ ಹೊಂದಲು ಬಯಸಿದೆ. ಫೆಲೆಸ್ತೀನ್‌ನಲ್ಲಿ ರಾಜತಾಂತ್ರಿಕ ಕೌಶಲ್ಯದ ಶಿಕ್ಷಣ ನೀಡುವ ಸಂಸ್ಥೆಯೊಂದನ್ನು ಆರಂಭಿಸುವ ಕಾರ್ಯಕ್ಕೆ ಭಾರತ ನೆರವಾಗುತ್ತಿದೆ. ಭಾರತವು ಈ ವರ್ಷದಿಂದ ಫೆಲೆಸ್ತೀನ್ ವಿದ್ಯಾರ್ಥಿಗಳ ವಿನಿಮಯ ಸಂಖ್ಯೆಯನ್ನು ದ್ವಿಗುಣಗೊಳಿಸಲಿದ್ದು 100 ವಿದ್ಯಾರ್ಥಿಗಳನ್ನು ವಿನಿಮಯ ಮಾಡಿಕೊಳ್ಳಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಬಳಿಕ ಭಾರತದ ಪ್ರಧಾನಿ ಮೋದಿ ಹಾಗೂ ಫೆಲೆಸ್ತೀನ್ ಅಧ್ಯಕ್ಷ ಅಬ್ಬಾಸ್ ಹಲವು ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡರು ಹಾಗೂ ಜಂಟಿ ಹೇಳಿಕೆಯನ್ನು ಬಿಡುಗಡೆಗೊಳಿಸಿದರು.

ಭಾರತದ ಅಲಿಪ್ತ ನಿಲುವಿಗೆ ಸ್ವಾಗತ: ಅಬ್ಬಾಸ್

ಇದಕ್ಕೂ ಮೊದಲು ಮಾತನಾಡಿದ ಫೆಲೆಸ್ತೀನ್ ಅಧ್ಯಕ್ಷ ಅಬ್ಬಾಸ್, ಇಸ್ರೇಲ್ ಮತ್ತು ಫೆಲೆಸ್ತೀನ್ ವಿಷಯದಲ್ಲಿ ಭಾರತ ತೆಗೆದುಕೊಂಡಿರುವ ಅಲಿಪ್ತ ನಿಲುವನ್ನು ತಮ್ಮ ದೇಶ ಸ್ವಾಗತಿಸುತ್ತದೆ ಎಂದರು. ನಾವು ಮಾತುಕತೆಗೆ ಸಿದ್ಧ ಎಂದು ಹೇಳಿದ್ದೇವೆ ಮತ್ತು ಈಗಲೂ ಹೇಳುತ್ತಾ ಬಂದಿದ್ದೇವೆ. ಅಂತರಾಷ್ಟ್ರೀಯ ಶಕ್ತಿಯಾಗಿ ಭಾರತ ವಹಿಸಿರುವ ಪಾತ್ರ ಹಾಗೂ ಅಲಿಪ್ತ ಚಳವಳಿಯಲ್ಲಿ ಭಾರತದ ಪಾತ್ರದ ಬಗ್ಗೆ ನಮಗೆ ನಂಬಿಕೆಯಿದೆ. ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ತಳೆದಿರುವ ನಿಲುವು ಪ್ರಾದೇಶಿಕ ಶಾಂತಿಗೆ ಪೂರಕವಾಗಿದೆ ಎಂದು ಅಬ್ಬಾಸ್ ಹೇಳಿದರು.

1967ರ ಒಪ್ಪಂದದ ಹಾಗೂ ‘ಎರಡು ರಾಷ್ಟ್ರ’ ನೀತಿಯ ಅನ್ವಯ, ನಮ್ಮ ರಾಷ್ಟ್ರೀಯ ಧ್ಯೇಯವಾದ ಸ್ವಾತಂತ್ರ್ಯ ಹಾಗೂ ವಿಮೋಚನೆಯ ಗುರಿಯನ್ನು ರಾಜಕೀಯ ಉಪಕ್ರಮ ಹಾಗೂ ಮಾತುಕತೆಯ ಮೂಲಕ ಸಾಧಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ ಎಂದು ಅಬ್ಬಾಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News