×
Ad

ಸ್ವಚ್ಛ ಭಾರತ ನಿಧಿ ಬಳಕೆಯಲ್ಲಿ ಭಾರೀ ಅವ್ಯವಹಾರ: ಅಧಿಕಾರಿಯಿಂದ 1 ಕೋ. ರೂ. ದುರ್ಬಳಕೆ; ಆರೋಪ

Update: 2018-02-12 22:14 IST
ಸಾಂದರ್ಭಿಕ ಚಿತ್ರ

ಚಂಡೀಗಢ, ಫೆ.12: ಸ್ಥಳೀಯ ಆಡಿಟ್ ಇಲಾಖೆಯ ಅನುಮತಿ ಪಡೆಯದೆ ಚಂಡೀಗಢ ಮಹಾನಗರ ಪಾಲಿಕೆಯ ಅಧಿಕಾರಿಯೋರ್ವರು ‘ಸ್ವಚ್ಛ ಭಾರತ’ ನಿಧಿಯಿಂದ ಸುಮಾರು 1 ಕೋಟಿ ರೂ.ಯಷ್ಟು ಮೊತ್ತದ ಹಣ ಹಿಂತೆಗೆದಿದ್ದಾರೆ . ಇದು ಗಂಭೀರ ಪ್ರಮಾಣದ ಹಣದ ಅವ್ಯವಹಾರವಾಗಿದೆ ಎಂದು ಪಾಲಿಕೆಯ ವಾರ್ಷಿಕ ಆಡಿಟ್ ವರದಿಯಲ್ಲಿ ಗಮನ ಸೆಳೆಯಲಾಗಿದೆ.

 ಚಂಡೀಗಢ ಮಹಾನಗರಪಾಲಿಕೆಯ ವೈದ್ಯಾಧಿಕಾರಿ ಡಾ ಪರ್ಮೀಂದರ್ ಸಿಂಗ್ ಭಟ್ಟಿ ಎಂಬವರು ಹಣ ಹಿಂಪಡೆದವರು. ಮಹಾನಗರಪಾಲಿಕೆಯ ಪ್ರಧಾನ ಕ್ಯಾಶ್ ಪುಸ್ತಕದಲ್ಲಿ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್(ಒಬಿಸಿ)ನ ಚಾಲ್ತಿ ಖಾತೆ(ಕರೆಂಟ್ ಅಕೌಂಟ್) ನಂ. 33490ರಲ್ಲಿ ದಾಖಲಾಗಿರುವ ಯಾವುದೇ ಎಂಟ್ರಿಯನ್ನೂ ಪರಿಶೀಲನೆ ಮಾಡಲಾಗಿಲ್ಲ ಹಾಗೂ ಹಣ ತೆಗೆಯುವ ಹಾಗೂ ಬಟವಾಡೆ ಮಾಡುವ ಅಧಿಕಾರಿಯ ಸಹಿ ಪಡೆಯಲಾಗಿಲ್ಲ. ತಿಂಗಳ ಲೆಕ್ಕ ಸಾರಾಂಶವನ್ನು ಬರೆಯಲಾಗಿಲ್ಲ . ಆದಾಯ ಮತ್ತು ವೆಚ್ಚದ ಉಲ್ಲೇಖವನ್ನು ಮಾತ್ರ ಮಾಡಲಾಗಿದೆ. ಅಲ್ಲದೆ ಕ್ಯಾಶ್ ಪುಸ್ತಕ ಮತ್ತು ಬ್ಯಾಂಕ್ ಖಾತೆಯಲ್ಲಿರುವ ಬ್ಯಾಲೆನ್ಸ್‌ನ ವ್ಯತ್ಯಾಸವನ್ನೂ ನಮೂದಿಸಲಾಗಿಲ್ಲ. ಅಲ್ಲದೆ ಮಹಾನಗರಪಾಲಿಕೆ ಆಯುಕ್ತರಿಂದ ಅಧಿಕಾರ ಪಡೆದಿರುವ ಅಧಿಕಾರಿ ಕ್ಯಾಶ್ ಪುಸ್ತಕಕ್ಕೆ ಸಹಿ ಹಾಕಿಲ್ಲ. ಅಲ್ಲದೆ ಸ್ವಚ್ಛ ಭಾರತ ನಿಧಿಯಿಂದ ಹಣ ಹಿಂಪಡೆಯಬೇಕಿದ್ದರೆ ನಗರಪಾಲಿಕೆಯ ಆಡಿಟ್ ವಿಭಾಗದ ಅನುಮತಿ ಬೇಕು. ಆದರೆ ಅನುಮತಿ ಪಡೆಯದೆ ಭಟ್ಟಿ ಸಾರ್ವಜನಿಕ ಆರೋಗ್ಯ ವಿಭಾಗಕ್ಕೆ ಎರಡು ಕಂತುಗಳಲ್ಲಿ ಹಣ ಹಿಂಪಡೆದಿದ್ದಾರೆ. 2016ರ ಫೆಬ್ರವರಿಯಲ್ಲಿ 1 ಲಕ್ಷ ರೂ. ಹಾಗೂ 2016ರ ಮಾರ್ಚ್‌ನಲ್ಲಿ ಒಂದೇ ದಿನ 1 ಕೋಟಿ ರೂ. ಹಿಂಪಡೆದಿದ್ದಾರೆ. ಅಲ್ಲದೆ ತನ್ನ ಪ್ರವಾಸ ಭತ್ತೆಯಾಗಿ 1 ಲಕ್ಷ ರೂ. ಮೊತ್ತವನ್ನೂ ಹಿಂಪಡೆದಿದ್ದು ಇದು ಗಂಭೀರ ಪ್ರಮಾಣದ ಹಣದ ಅವ್ಯವಹಾರವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಭಟ್ಟಿಯನ್ನು ಪ್ರಶ್ನಿಸಲಾಗಿದ್ದು, ಸಂಬಂಧಿತ ಅಧಿಕಾರಿಗಳು ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಿಫಾರಸು ಮಾಡಿರುವುದಾಗಿ ಆಡಿಟ್ ಅಧಿಕಾರಿ ತಿಳಿಸಿದ್ದಾರೆ.

     ಅಲ್ಲದೆ ಪಾಲಿಕೆಯ ಆರೋಗ್ಯ ವಿಭಾಗಕ್ಕೆ ನೀಡಿರುವ ವಾಹನದ ನಿರ್ವಹಣಾ ದಾಖಲೆ ಪುಸ್ತಕದಲ್ಲಿರುವ ವ್ಯತ್ಯಾಸಗಳ ಬಗ್ಗೆಯೂ ಆಡಿಟ್ ಅಧಿಕಾರಿಗಳು ಗಮನ ಸೆಳೆದಿದ್ದಾರೆ. ವಾಹನಕ್ಕೆ ಬಳಸಲಾಗುವ ಪೆಟ್ರೋಲ್ ಅಥವಾ ಡೀಸೆಲ್‌ನ ಸರಾಸರಿ ಲೆಕ್ಕವನ್ನೂ ನಮೂದಿಸಿಲ್ಲ. ನಿರ್ವಹಣಾ ದಾಖಲೆ ಪುಸ್ತಕಗಳಿಗೆ ವಾಹನದ ಉಸ್ತುವಾರಿ ಹೊಂದಿರುವ ಅಧಿಕಾರಿಗಳು ಸಹಿ ಹಾಕಿಲ್ಲ. ತಿಂಗಳಿಗೆ ಬಳಕೆಯಾಗುವ ಪೆಟ್ರೋಲ್, ತಿಂಗಳಿಗೆ ಚಲಿಸಿರುವ ಕಿ.ಮೀ. ಲೆಕ್ಕಾಚಾರವನ್ನು ಪುಸ್ತಕದಲ್ಲಿ ನೀಡಲಾಗಿಲ್ಲ ಎಂದು ಆಡಿಟ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News