7 ವರ್ಷದ ಬಾಲಕನ ಹತ್ಯೆಗೈದು ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟ !
ಹೊಸದಿಲ್ಲಿ, ಫೆ. 13: ಈಶಾನ್ಯ ದಿಲ್ಲಿಯ ಸ್ವರೂಪ್‌ನಗರದಲ್ಲಿ ಬಾಡಿಗೆದಾರನೋರ್ವ ಮಾಲಕನ 7 ವರ್ಷದ ಪುತ್ರನನ್ನು ಹತ್ಯೆಗೈದು, ಮೃತದೇಹವನ್ನು ತಿಂಗಳ ಕಾಲ ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕ ಆಶಿಶ್ ಜನವರಿ 7ರಂದು ನಾಪತ್ತೆಯಾಗಿದ್ದ. ನಾಥುಪುರ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಪತ್ತೆಯಾದ ಸೂಟ್‌ಕೇಸ್‌ನಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಾಡಿಗೆದಾರ ಅವದೇಶ್ ಸಕ್ಯಾನನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಅಧೀಕ್ಷಕ (ಈಶಾನ್ಯ)ವ ಅಸ್ಲಾಂ ಖಾನ್ ತಿಳಿಸಿದ್ದಾರೆ. ಬಾಲಕನ ಹತ್ಯೆಗೆ ಕಾರಣ ಏನು ಎಂಬುದು ಇದುವರೆಗೆ ಪತ್ತೆಯಾಗಿಲ್ಲ. ಬಾಡಿಗೆ ಮನೆಯಲ್ಲಿ ಪಾರ್ಟಿ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಾಲಕನ ಹೆತ್ತವರೊಂದಿಗೆ ಅವಧೇಶ್ ಕ್ರೋಧಗೊಂಡಿದ್ದ ಎನ್ನಲಾಗುತ್ತಿದೆ. ಬಾಲಕ ನನ್ನನ್ನು ತುಂಬಾ ಪ್ರೀತಿಸುತ್ತಿದ್ದ ಹಾಗೂ ನನ್ನನ್ನು ಮಾವ ಎಂದು ಕರೆಯುತ್ತಿದ್ದ ಎಂದು ಆರೋಪಿ ಅವಧೇಶ್ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಪತ್ತೆಯಾದ ಕೂಡಲೇ ಕೊಲೆಯಾದ ಸ್ಥಿತಿಯಲ್ಲಿ ಸೂಟ್‌ಕೇಸ್‌ನಲ್ಲಿದ್ದ ಬಾಲಕನ ಮೃತದೇಹ ಕಂಡು ಬಂದಿದೆ. ಆದರೆ, ಸಾವಿಗೆ ಕಾರಣ ಹಾಗೂ ಸಮಯ ಮರಣೋತ್ತರ ಪರೀಕ್ಷೆಯಿಂದ ತಿಳಿದು ಬರಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಅವಧೇಶ್ ಸಕ್ಯ ಕಳೆದ 8 ವರ್ಷಗಳಿಂದ ಈ ಕುಟುಂಬದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆತ ಈ ಮನೆಯಲ್ಲಿದ್ದುಕೊಂಡೇ ಯುಪಿಎಸ್‌ಸಿ ಪ್ರಾಥಮಿಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.