ಗುರುತಿನ ಸಾಕ್ಷಿ ಇಲ್ಲದವರಿಗೆ ಆಧಾರ್ ಪ್ರಮುಖ ಆಧಾರ: ನ್ಯಾ.ಚಂದ್ರಚೂಡ್

Update: 2018-02-13 15:58 GMT

ಹೊಸದಿಲ್ಲಿ, ಫೆ.13: ತಮ್ಮ ಗುರುತನ್ನು ದೃಢೀಕರಿಸಬಲ್ಲ ಯಾವುದೇ ಸಾಕ್ಷಿ ಇಲ್ಲದಿರುವ ಭಾರತೀಯರ ಪಾಲಿಗೆ ಆಧಾರ್ ಅತ್ಯಂತ ಪ್ರಮುಖ ಗುರುತಿನ ಚೀಟಿಯಾಗಿದೆ ಎಂದು ನ್ಯಾಯಾಧೀಶರಾದ ಡಿ.ವೈ ಚಂದ್ರಚೂಡ್ ಮಂಗಳವಾರ ತಿಳಿಸಿದ್ದಾರೆ.

ಪ್ರತಿಯೊಬ್ಬ ಭಾರತೀಯನ ಬಳಿ ಒಂದಿಲ್ಲೊಂದು ಗುರುತಿನ ಸಾಕ್ಷಿ ಇರುತ್ತದೆ ಎಂದು ಊಹಿಸುವುದು ತಪ್ಪಾಗುತ್ತದೆ. ಉದಾಹರಣೆಗೆ, ವಲಸೆ ಕಾರ್ಮಿಕರ ಬಳಿ ಗುರುತಿನ ಯಾವುದೇ ಸಾಕ್ಷಿ ಇರುವುದಿಲ್ಲ. ಅಂಥಾ ಸಂದರ್ಭದಲ್ಲಿ ಸರಕಾರದ ಆಧಾರ್ ನೀತಿಯು ಒಂದು ಆಶಾಕಿರಣವಾಗುತ್ತದೆ ಎಂದು ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ನೇತೃತ್ವದ ಐದು ಸದಸ್ಯ ಪೀಠದ ಭಾಗವಾಗಿರುವ ಡಿ.ವೈ ಚಂದ್ರಚೂಡ್ ತಿಳಿಸಿದ್ದಾರೆ.

ಆಧಾರ್, ತಮ್ಮ ಬಳಿ ಯಾವುದೇ ಗುರುತಿನ ಸಾಕ್ಷಿ ಇಲ್ಲದ ಜನರಿಗೆ ತಮ್ಮ ಹಕ್ಕನ್ನು ಪಡೆಯಲು ಅವಕಾಶ ಕಲ್ಪಿಸುತ್ತದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ನ್ಯಾಯಾಧೀಶರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಮೊದಲನೆಯದಾಗಿ, ನಿಮ್ಮ ಬಳಿ ಯಾವುದೇ ಗುರುತಿನ ಸಾಕ್ಷಿ ಇಲ್ಲದಿದ್ದರೆ, ನಿಮಗೆ ಆಧಾರ್ ಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು. ಆಧಾರ್ ಉದ್ದೇಶ ಜನರಿಗೆ ಗುರುತಿನ ಲಾಭವನ್ನು ನೀಡುವುದಲ್ಲ. ಬದಲಿಗೆ ಅದು ಗುರುತನ್ನು ದೃಢೀಕರಿಸುವ ಸಾಧನವಾಗಿದೆ. ಹಾಗಾಗಿ ಗುರುತಿನ ದೃಢೀಕರಣವನ್ನು ಬಯೋಮೆಟ್ರಿಕ್ಸ್‌ಗೆ ಯಾಕೆ ಜೋಡಿಸಬೇಕು ಎಂದು ಸಿಬಲ್ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ನ್ಯಾಯಾಧೀಶ ಎ.ಕೆ ಸಿಕ್ರಿ, ಬಯೋಮೆಟ್ರಿಕ್ ಪಡೆಯಬೇಕಾಗಿದೆ ಯಾಕೆಂದರೆ ಸರಕಾರವು ನಕಲಿ ಗುರುತಿನ ಚೀಟಿಗಳನ್ನು ಹೋಗಲಾಡಿಸಲು ಆಧಾರ್‌ಅನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ತಿಳಿಸಿದರು. ಇತರ ಗುರುತಿನ ಚೀಟಿಗಳನ್ನು ನಕಲು ಮಾಡಲು ಸಾಧ್ಯವಿರುವ ಕಾರಣ ಕನಿಷ್ಟ ಒಂದು ಗುರುತಿನ ಚೀಟಿಯಲ್ಲಾದರೂ ಬಯೋಮೆಟ್ರಿಕ್ಸ್ ಇರಲಿ ಎಂಬುದು ಸರಕಾರದ ಆಶಯವಿರಬಹುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News