×
Ad

ತಾಜ್‌ಮಹಲ್‌ನ ಮುಖ್ಯ ಸಮಾಧಿಭವನ ನೋಡಲು 200 ರೂ.ಶುಲ್ಕ, ಪ್ರವೇಶ ಶುಲ್ಕದಲ್ಲಿಯೂ ಏರಿಕೆ

Update: 2018-02-13 21:38 IST

ಹೊಸದಿಲ್ಲಿ,ಫೆ.13: ಮುಂದಿನ ಎಪ್ರಿಲ್ 1ರಿಂದ ಆಗ್ರಾದಲ್ಲಿರುವ ಜಗತ್ಪ್ರಸಿದ್ಧ ತಾಜ್‌ಮಹಲ್‌ಗೆ ಭೇಟಿ ಪ್ರವಾಸಿಗಳ ಪಾಲಿಗೆ ದುಬಾರಿಯಾಗಲಿದೆ. ಮುಖ್ಯ ಸಮಾಧಿಭವನದ ವೀಕ್ಷಣೆಗೆ 200 ರೂ.ಶುಲ್ಕವನ್ನು ವಿಧಿಸಲು ಮತ್ತು ಪ್ರವೇಶ ಶುಲ್ಕವನ್ನೂ ಈಗಿನ 40 ರೂ.ನಿಂದ 50 ರೂ.ಗೆ ಹೆಚ್ಚಿಸಲು ಸರಕಾರವು ನಿರ್ಧರಿಸಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಂಸ್ಕೃತಿ ಸಚಿವ ಮಹೇಶ ಶರ್ಮಾ ಅವರು, ತಾಜ್‌ಮಹಲ್‌ನ ಸಂರಕ್ಷಣೆಗಾಗಿ ಮತ್ತು ಪ್ರವಾಸಿಗಳ ದಟ್ಟಣೆಯ ನಿಯಂತ್ರಣಕ್ಕಾಗಿ ಈ ಬದಲಾವಣೆಗಳನ್ನು ತರಲಾಗಿದೆ ಎಂದು ಹೇಳಿದರು. ಈಗ ತಾಜ್‌ಮಹಲ್‌ಗೆ ಭೇಟಿ ನೀಡುವ ಪ್ರವಾಸಿಗಳು ಮುಖ್ಯ ಸಮಾಧಿಭವನವನ್ನು ವೀಕ್ಷಿಸಲು ಯಾವುದೇ ಪ್ರತ್ಯೇಕ ಶುಲ್ಕವನ್ನು ತೆರಬೇಕಾಗಿಲ್ಲ.

ಮುಂದಿನ ತಲೆಮಾರುಗಳಿಗಾಗಿ ತಾಜ್‌ಮಹಲ್‌ನ್ನು ಸಂರಕ್ಷಿಸಿಡಬೇಕಾದ ಅಗತ್ಯವಿದೆ. 50 ರೂ.ಗಳ ಹೊಸ ಬಾರ್ ಕೋಡೆಡ್ ಟಿಕೆಟ್‌ಗಳು ಮೂರು ಗಂಟೆಗಳ ಅವಧಿಗೆ ಸೀಮಿತವಾಗಿರುತ್ತವೆ ಎಂದ ಶರ್ಮಾ, ತಾಜ್‌ಮಹಲ್‌ನ ಧಾರಣ ಸಾಮರ್ಥ್ಯದ ಕುರಿತು ಅಧ್ಯಯನ ನಡೆಸಿರುವ ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ(ನೀರಿ)ಯು ಮುಖ್ಯ ಸಮಾಧಿಭವನದ ಸಮಗ್ರತೆಯ ರಕ್ಷಣೆಗಾಗಿ ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗಳ ಸಂಖ್ಯೆಯನ್ನು ತಕ್ಷಣದಿಂದಲೇ ತಗ್ಗಿಸುವಂತೆ ತನ್ನ ಇತ್ತೀಚಿನ ವರದಿಯಲ್ಲಿ ಶಿಫಾರಸು ಮಾಡಿತ್ತು ಎಂದೂ ತಿಳಿಸಿದರು.

ತಾಜ್‌ಮಹಲ್‌ನ ಸಂರಕ್ಷಣೆಗಾಗಿ ‘ವಿಜನ್ ಡಾಕ್ಯುಮೆಂಟ್’ನ್ನು ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಇತ್ತೀಚಿಗೆ ಉತ್ತರ ಪ್ರದೇಶ ಸರಕಾರಕ್ಕೆ ನಿರ್ದೇಶ ನೀಡಿತ್ತು.

ತಾಜ್‌ಮಹಲ್ ಪ್ರವೇಶಕ್ಕಾಗಿ 1,250 ರೂ.ಗಳನ್ನು ಪಾವತಿಸುವ ವಿದೇಶಿ ಪ್ರವಾಸಿ ಗಳಿಗೆ ಪ್ರತ್ಯೇಕ ಸರದಿ ಸಾಲು, ಪ್ರತ್ಯೇಕ ಶೌಚಾಲಯಗಳು ಮತ್ತು ಆಗ್ರಾ ರೈಲ್ವೆ ನಿಲ್ದಾಣದಿಂದ ತಾಜ್‌ಗೆ ಪ್ರತ್ಯೇಕ ಕಾರಿಡಾರ್ ರಚನೆ ಇತ್ಯಾದಿ ವಿಶೇಷ ಕ್ರಮಗಳನ್ನು ತನ್ನ ಸಚಿವಾಲಯವು ಕೈಗೊಂಡಿದೆ ಎಂದು ಶರ್ಮಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News