×
Ad

ಸುಳ್ಳು ಸುದ್ದಿ ಹರಡುವವರ ವಿರುದ್ಧ ಟ್ವೀಟ್ ಮಾಡಿದ್ದಕ್ಕೆ ಇಂಡಿಯಾ ಟುಡೇ ಸಮೂಹದ ಹಿರಿಯ ಸಂಪಾದಕಿ ಮನೆಗೆ

Update: 2018-02-13 21:46 IST

ಹೊಸದಿಲ್ಲಿ, ಫೆ. 13 : ತನ್ನ ಟಿವಿ ನಿರೂಪಕರು ಹಸಿ ಸುಳ್ಳುಗಳನ್ನು ಹರಡುತ್ತಿರುವ ಆರೋಪ ಎದುರಿಸುತ್ತಿರುವ ಇಂಡಿಯಾ ಟುಡೇ ಗ್ರೂಪ್ ಇದೀಗ ತನ್ನ ಸಮೂಹದ ರಾಜಕೀಯ ಸಂಪಾದಕಿಯೊಬ್ಬರನ್ನು ಕೆಲಸದಿಂದ ತೆಗೆದು ಹಾಕಿದೆ. ಇದಕ್ಕೆ ಕಾರಣ ಆಕೆ ಸುಳ್ಳು ಸುದ್ದಿ ಹರಡಿದ್ದಾರೆ ಎಂದಲ್ಲ. ಬದಲಿಗೆ ಸುಳ್ಳು ಸುದ್ದಿ ಹಾಗು ದ್ವೇಷ ಹರಡುವವರನ್ನು ಹಾಗು ಅವರನ್ನು ಉದ್ಯೋಗಕ್ಕೆ ಇಟ್ಟವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಕ್ಕೆ !

ಇಂಡಿಯಾ ಟುಡೇ ಸಮೂಹದ ಲೇಖನ, ಅಭಿಪ್ರಾಯ, ಅಂಕಣಗಳ ವೆಬ್ ಸೈಟ್  ಡೈಲಿ ಓ (DailyO) ನ ರಾಜಕೀಯ ಸಂಪಾದಕಿ ಅಂಗಶುಕಂತಾ ಚಕ್ರವರ್ತಿ ಕೆಲಸ ಕಳಕೊಂಡವರು.

ಈಕೆ ಮಾಡಿದ ತಪ್ಪು - ಸುಳ್ಳು ಸುದ್ದಿ, ದ್ವೇಷ ಹರಡುವ ನಿರೂಪಕರು, ವರದಿಗಾರರು, ಸಂಪಾದಕರನ್ನು ಉದ್ಯೋಗಕ್ಕೆ ಇಟ್ಟುಕೊಂಡಿರುವವರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕು ಹಾಗು ಅಂತಹ ಮಾಧ್ಯಮಗಳನ್ನು ಜಾತ್ಯತೀತ ಉದ್ಯಮ ಸಂಸ್ಥೆಗಳು ಹಾಗು ರಾಜಕಾರಣಿಗಳು ಬಹಿಷ್ಕರಿಸ ಬೇಕು ಎಂದು ತನ್ನ ವೈಯಕ್ತಿಕ ಟ್ವಿಟರ್ ಖಾತೆಯಲ್ಲಿ ಬರೆದಿದ್ದು.

ಫೆಬ್ರವರಿ 4 ರಂದು ಅಂಗಶುಕಂತಾ ಈ ಟ್ವೀಟ್ ಮಾಡಿದ್ದರು. ಯಾವುದೇ ಸಂಸ್ಥೆಯ ಹೆಸರಿಲ್ಲದ ಈ ಟ್ವೀಟ್ ಇಂಡಿಯಾ ಟುಡೇ ಆಡಳಿತ ಮಂಡಳಿಯ ಕಣ್ಣು ಕೆಂಪಾಗಿಸಿದೆ. ಹಾಗಾಗಿ ಈ ಟ್ವೀಟ್ ಡಿಲೀಟ್ ಮಾಡುವಂತೆ ಸಂಸ್ಥೆಯ ಹಿರಿಯ ಸಂಪಾದಕರಿಂದ ಅಂಗಶುಕಂತಾಗೆ ಸಂದೇಶ ಬಂದಿದೆ. ಅದನ್ನವರು ಒಪ್ಪಿಲ್ಲ. ಕೊನೆಗೆ ಒಂದೋ ಟ್ವೀಟ್ ಡಿಲೀಟ್ ಮಾಡಿ, ಇಲ್ಲವೇ ರಾಜೀನಾಮೆ ಕೊಡಿ ಅಥವಾ ನಿಮ್ಮ ಒಪ್ಪಂದವನ್ನು ನಾವು ಕೊನೆಗೊಳಿಸುತ್ತೇವೆ ಎಂಬ ಆಯ್ಕೆಯನ್ನು ಅವರ ಮುಂದೆ ಇಡಲಾಗಿದೆ. ಇದಕ್ಕೆ ಬಗ್ಗದ ಅಂಗಶುಕಂತಾ ಈಗ ಕೆಲಸ ಕಳೆದುಕೊಂಡಿದ್ದಾರೆ. 



ಅಂಗಶುಕಂತಾ ಅವರು ಸಂಪಾದಕೀಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರಿಂದ ಅವರ ಒಪ್ಪಂದವನ್ನು ಕೊನೆಗೊಳಿಸಲಾಗಿದೆ ಎಂದು ಸಂಸ್ಥೆಯ ಹಿರಿಯಧಿಕಾರಿಗಳು thewire.in ಗೆ ತಿಳಿಸಿದ್ದಾರೆ. 

ಈ ಹಿಂದೆ ಇಂಡಿಯಾ ಟುಡೇಯ ಹಿಂದಿ ಚಾನಲ್ ಆಜ್ ತಕ್ ನ  ನಿರೂಪಕ ರೋಹಿತ್ ಸರ್ದಾನ ಉತ್ತರ ಪ್ರದೇಶದ ಕಾಸ್ ಗಂಜ್ ನಲ್ಲಿ ಮುಸ್ಲಿಮರು ಹಿಂದೂ ಯುವಕರನ್ನು ತ್ರಿವರ್ಣ ಧ್ವಜ ಹಾರಿಸಲು ಬಿಡಲಿಲ್ಲ ಎಂದು ಸುಳ್ಳು ಟ್ವೀಟ್ ಮಾಡಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದರು. ಹಾಗೆಯೆ ಇದೇ ಸಮೂಹದ ಮೇಲ್ ಟುಡೇ ಸಂಪಾದಕ ಅಭಿಜಿತ್ ಮಜುಂದಾರ್ ಅವರು ಕಾಸ್ ಗಂಜ್ ನಲ್ಲಿ ಮೃತಪಟ್ಟಿದ್ದು ಒಬ್ಬ ಹಿಂದೂ ಅಲ್ಲ, ಇಬ್ಬರು ಎಂದು ಸುಳ್ಳು ಹರಡಿ ವ್ಯಾಪಕ ಟೀಕೆ ಎದುರಿಸಿದ್ದರು. ಅದಕ್ಕೂ ಮೊದಲು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಪರೇಶ್ ಮೇಸ್ತ ಎಂಬ ಯುವಕನ ಸಾವಿನ ಬಗ್ಗೆ ಇಂಡಿಯಾ ಟುಡೇ ಸಮೂಹದ ಶಿವ್ ಅರೂರ್ ಎಂಬ ನಿರೂಪಕ ಸುಳ್ಳು ಸುದ್ದಿ ಹರಡಿದ್ದರು. ಅದಕ್ಕೆ ತೀವ್ರ ವಿರೋಧ ವ್ಯಕ್ತವಾದಾಗ ಸೂಕ್ತ ಸ್ಪಷ್ಟೀಕರಣ ನೀಡದೆ  ಜಾರಿಕೊಂಡಿದ್ದರು. 

ಮೇ 2017 ರಲ್ಲಿ ಭಾರತದ ಸೇನೆ ಪಾಕಿಸ್ತಾನದ  ನೆಲೆಗಳ ಮೇಲೆ ದಾಳಿ ನಡೆಸಿ ಹಲವು ಪಾಕ್ ಸೈನಿಕರನ್ನು ಕೊಂದಿವೆ ಎಂದು ವರದಿ ಮಾಡಿದ್ದ ಆಜ್ ತಕ್ ಅದು ಸುಳ್ಳು ಎಂದು ಗೊತ್ತಾಗಿ ಮುಖಭಂಗ ಎದುರಿಸಿತ್ತು. ನೋಟು ರದ್ದತಿಯಾದಾಗ ಹೊಸ ನೋಟಿನಲ್ಲಿ ಜಿಪಿಎಸ್ ಚಿಪ್ಪಿದೆ ಎಂದು ಆಜ್ ತಕ್ ನಿರೂಪಕರು ವಿವರಿಸುವ ವಿಡಿಯೋ ಈಗಲೂ ಚಾಲ್ತಿಯಲ್ಲಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News