×
Ad

ಪ್ರೇಮಿಗಳ ದಿನಾಚರಣೆ ಪಾಶ್ಚಿಮಾತ್ಯ ಸಂಸ್ಕೃತಿ ಎಂದ ಲಕ್ನೋ ವಿವಿ !

Update: 2018-02-13 22:10 IST

ಲಕ್ನೊ, ಫೆ. 13: ಬುಧವಾರ ಕ್ಯಾಂಪಸ್‌ಗೆ ಆಗಮಿಸದಂತೆ ಲಕ್ನೋ ವಿಶ್ವವಿದ್ಯಾನಿಲಯ ತನ್ನ ವಿದ್ಯಾರ್ಥಿಗಳಿಗೆ ಸಲಹೆ ನೀಡಿದೆ ಹಾಗೂ ಪ್ರೇಮಿಗಳ ದಿನಾಚರಣೆಯಂದು ಆದೇಶ ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದೆ.

‘‘ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಪ್ರೇರಿತರಾದ ಕೆಲವು ವಿದ್ಯಾರ್ಥಿಗಳು ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನಾಗಿ ಆಚರಿಸುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಹಾಶಿವರಾತ್ರಿ ದಿನವಾದ ಫೆಬ್ರವರಿ 14ರಂದು ವಿಶ್ವವಿದ್ಯಾನಿಲಯದ ಕ್ಯಾಂಪಸ್ ಮುಚ್ಚಲಾಗುವುದು ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ’’ ಎಂದು ವಿ.ವಿ. ಶಿಸ್ತುಪಾಲನಾ ಅಧಿಕಾರಿ ವಿನೋದ್ ಸಿಂಗ್ ಹೇಳಿದ್ದಾರೆ. ಫೆಬ್ರವರಿ 14ರಂದು ಈ ಕ್ಯಾಂಪಸ್ ಸಂಪೂರ್ಣ ಮುಚ್ಚಲಿದೆ. ಕ್ಯಾಂಪಸ್‌ನಲ್ಲಿ ಯಾವುದೇ ಹೆಚ್ಚುವರಿ ತರಗತಿ, ಪ್ರಾಯೋಗಿಕ ಪರೀಕ್ಷೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಬುಧವಾರ ಕ್ಯಾಂಪಸ್‌ಗೆ ವಿದ್ಯಾರ್ಥಿಗಳನ್ನು ಕಳುಹಿಸಬೇಡಿ ಎಂದು ಕೂಡ ಅವರು ಹೆತ್ತವರು ಹಾಗೂ ಪೋಷಕರಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News