×
Ad

ಶತಮಾನದ ಕೊನೆಗೆ ಏರಿಕೆಯಾಗಲಿದೆ ಸಮುದ್ರ ನೀರಿನ ಮಟ್ಟ

Update: 2018-02-13 22:26 IST

ವಾಶಿಂಗ್ಟನ್, ಫೆ. 13: ಗ್ರೀನ್‌ಲ್ಯಾಂಡ್ ಮತ್ತು ಅಂಟಾರ್ಕ್ಟಿಕದಲ್ಲಿ ಕರಗುತ್ತಿರುವ ಮಂಜುಗಡ್ಡೆಯು ಸಮುದ್ರ ನೀರಿನ ಮಟ್ಟದ ಏರಿಕೆಯ ಗತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ನೂತನ ಉಪಗ್ರಹ ಆಧಾರಿತ ಸಂಶೋಧನೆಯೊಂದು ತಿಳಿಸಿದೆ.

 ಈಗಿನ ವೇಗದಲ್ಲಿ, ಇಂದಿನ ಪರಿಸ್ಥಿತಿಗೆ ಹೋಲಿಸಿದರೆ ಈ ಶತಮಾನದ ಕೊನೆಯ ಹೊತ್ತಿಗೆ ಜಗತ್ತಿನ ಸಾಗರಗಳ ಸರಾಸರಿ ನೀರಿನ ಮಟ್ಟ ಕನಿಷ್ಠ 2 ಅಡಿ ಏರುತ್ತದೆ ಎಂದು ‘ಪ್ರೊಸೀಡಿಂಗ್ಸ್ ಆಫ್ ದ ನ್ಯಾಶನಲ್ ಅಕಾಡಮೀಸ್ ಆಫ್ ಸಯನ್ಸಸ್’ನ ಸೋಮವಾರ ಪ್ರಕಟಗೊಂಡ ವರದಿಯೊಂದು ಹೇಳಿದೆ.

ಸಾಗರಗಳು ಬಿಸಿಯಾಗುವುದು ಮತ್ತು ನೀರ್ಗಲ್ಲುಗಳು ಮತ್ತು ಮಂಜುಗಡ್ಡೆಯ ತುಂಡುಗಳು ಕರಗುವುದರಿಂದ ಸಾಗರ ನೀರಿನ ಮಟ್ಟ ಹೆಚ್ಚುತ್ತದೆ. ಸಮುದ್ರ ಮಟ್ಟ ಏರಿಕೆಯ ವೇಗ ಹೆಚ್ಚಿರುವುದನ್ನು 25 ವರ್ಷಗಳ ಉಪಗ್ರಹ ಮಾಹಿತಿಯ ಆಧಾರದಲ್ಲಿ ನಡೆಸಿದ ಅಧ್ಯಯನವು ಸೂಚಿಸಿದೆ. ಬೃಹತ್ ಹಿಮರಾಶಿಗಳ ಕರಗುವಿಕೆಯಿಂದ ಈ ಪರಿಸ್ಥಿತಿ ಉಂಟಾಗಿದೆ.

 ‘‘ಇದೊಂದು ಗಂಭೀರ ವಿಷಯವಾಗಿದೆ. ಯಾಕೆಂದರೆ ಸಾಗರ ಮಟ್ಟ ಏರಿಕೆಯನ್ನು ಅತ್ಯಂತ ಕನಿಷ್ಠ ಮಟ್ಟದಲ್ಲಿ ಬಿಂಬಿಸಲಾಗಿದೆ. ವಾಸ್ತವವಾಗಿ ಏರಿಕೆಯ ಮಟ್ಟ ಹೆಚ್ಚಾಗುವ ಸಾಧ್ಯತೆಯಿದೆ’’ ಎಂದು ವರದಿಯ ಪ್ರಧಾನ ಲೇಖಕ ಕೊಲರಾಡೊ ವಿಶ್ವವಿದ್ಯಾನಿಲಯದ ಸ್ಟೀವ್ ನೀರಮ್ ಹೇಳುತ್ತಾರೆ.

ಸಮುದ್ರ ನೀರಿನ ಮಟ್ಟದಲ್ಲಿ ಆಗುವ ಕೊಂಚ ಏರಿಕೆಯೂ ಪ್ರವಾಹ ಮತ್ತು ಭೂಕೊರೆತಕ್ಕೆ ಕಾರಣವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News