ಹೆಣ್ಣಿನ ಸಾಮರ್ಥ್ಯ ಅರಿಯದ ಸಾಂಪ್ರದಾಯಿಕ ಮನಸ್ಸುಗಳು

Update: 2018-02-13 18:49 GMT

ನಮ್ಮ ಬಡವಾಣೆಯಲ್ಲಿ ಮನೆಗಳು ಸಿದ್ಧಗೊಳ್ಳುತ್ತಿದ್ದಂತೆಯೇ ಅನೇಕ ಮನೆಗಳ ಮಾಲಕರು ಅವುಗಳನ್ನು ಬಾಡಿಗೆಗೆ ಕೊಟ್ಟದ್ದೂ ಇದೆ. ಯಾಕೆಂದರೆ ಅವರೆಲ್ಲಾ ದೂರದ ಊರುಗಳಲ್ಲಿದ್ದು ಉದ್ಯೋಗಿಗಳಾಗಿದ್ದರು. ತಮ್ಮ ಸ್ವಂತ ಊರಲ್ಲಿ ನಿವೃತ್ತಿಯಾದ ಮೇಲೆ ಸ್ವಂತ ಸೂರು ಒಂದಿರಲಿ ಎಂಬ ಆಸೆಯಿಂದ ಮನೆ ಕಟ್ಟಿಕೊಂಡವರು. ಬಹುಶಃ ಆಗ ಬ್ಯಾಂಕುಗಳು ಗೃಹಸಾಲ ಕೊಡುವ ಯೋಜನೆಗಳನ್ನು ಕೈಕೊಂಡದ್ದರಿಂದ ಮಧ್ಯಮ ವರ್ಗದವರಿಗೆ ಸ್ವಂತ ಮನೆಯ ಆಸೆ ಕೈಗೂಡಿತೆಂದೇ ಹೇಳಬೇಕು. ನಮ್ಮ ಬಡಾವಣೆಯಲ್ಲಿ ಬ್ಯಾಂಕ್ ಉದ್ಯೋಗಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರು. ನಮ್ಮ ನಿವೇಶನದ ಹಿಂಬದಿಯಲ್ಲಿದ್ದ ವೈದ್ಯೆಯ ಮನೆ ನಮ್ಮ ಮನೆಯಿಂದ ಸುಮಾರು ಹತ್ತು ಹನ್ನೆರಡು ಅಡಿಗಳಷ್ಟು ತಗ್ಗಿನಲ್ಲಿತ್ತು. ನಮ್ಮ ಮನೆಯ ನಿರ್ಮಾಣ ಪೂರ್ತಿಗೊಳ್ಳುವ ಹಂತಕ್ಕೆ ಬರುತ್ತಿದ್ದಂತೆಯೇ ನಮ್ಮ ಕಂಟ್ರಾಕ್ಟರ್‌ರಿಗೂ ಅವರಿಗೂ ವ್ಯವಹಾರದಲ್ಲಿ ಅದೇನೋ ಅಸಮಾಧಾನ ಉಂಟಾಗಿತ್ತು. ಇದನ್ನು ಕಂಟ್ರಾಕ್ಟರ್ ನಮ್ಮಲ್ಲಿ ತಿಳಿಸಿ ಅವರ ಜೊತೆಗೆ ಸ್ನೇಹ ಬೇಡ ಎಂಬಂತಹ ಮಾತುಗಳನ್ನು ಹೇಳಿದರು. ಅವರಿಬ್ಬರ ನಡುವಿನ ಅಸಮಾಧಾನಗಳಿಗೆ ನಾವಂತೂ ಕಾರಣರಲ್ಲ. ನಮಗೆ ಅದು ಸಂಬಂಧಿಸಿದ ವಿಷಯವೂ ಅಲ್ಲವಾದ್ದರಿಂದ ನಾನು ಆ ನನ್ನ ನೆರೆಯವರೊಂದಿಗೆ ಮಾತು ಬಿಡುವ ಪ್ರಶ್ನೆಯೇ ಇಲ್ಲ. ನಮ್ಮವರ ಬಳಿಯೂ ಆಕೆಯ ಬಗ್ಗೆ ಹೇಳಿ ಅವರಲ್ಲಿ ಮಾತನಾಡದಂತೆ ಹೇಳಿದರು. ಆಗ ನನ್ನ ಮನಸ್ಸು ಅವರ ಮಾತುಗಳಿಂದ ಗ್ರಹಿಸಿಕೊಂಡ ವಿಚಾರಗಳು ಹೀಗೆ.

ಆಕೆ ಒಂಟಿಯಾಗಿ ಇದ್ದುದು ಅಪರಾಧ ಎನ್ನುವಂತಿತ್ತು. ಜೊತೆಗೆ ಇದೇ ಬಡಾವಣೆಯಲ್ಲಿ ಇನ್ನೊಂದು ಮನೆಯನ್ನು ನಿರ್ಮಾಣ ಮಾಡುವ ಮಾಲಕರು ಗಲ್ಫ್ ದೇಶದಿಂದ ವೃತ್ತಿಯಿಂದ ನಿವೃತ್ತರಾಗಿ ಬಂದು ನೋಡಿಕೊಳ್ಳುತ್ತಿದ್ದರು. ಅವರ ಮಡದಿ ವಿದೇಶದಲ್ಲಿ ಇನ್ನೂ ವೃತ್ತಿ ನಿರತರಾಗಿದ್ದರು. ನನಗೆ ಈ ದಂಪತಿಯ ಪರಿಚಯವಿತ್ತು. ನನ್ನ ನೆರೆಯ ವೈದ್ಯೆಯ ಪತಿಯೂ ಅದೇ ದೇಶದಲ್ಲಿದ್ದವರಾದುದರಿಂದ ಪರಿಚಯ ಸ್ನೇಹಿತರಾಗುವುದಕ್ಕೆ ಅವಕಾಶ ನೀಡಿತು. ಜೊತೆಗೆ ಇಬ್ಬರೂ ತಮ್ಮ ಮಾತೃಭಾಷೆ ಕೊಂಕಣಿಯಲ್ಲಿ ಮಾತನಾಡುತ್ತಿದ್ದರು. ವೈದ್ಯೆ ಹಿಂದೂ ಕೊಂಕಣಿ ಆಗಿದ್ದರೆ, ಆ ಇನ್ನೊಬ್ಬ ಪುರುಷ ಕ್ರಿಶ್ಚಿಯನ್ ಕೊಂಕಣಿಗರಾಗಿದ್ದರು. ಧರ್ಮ, ಜಾತಿಗಳಿಗಿಂತ ಭಾಷೆ ಜನರನ್ನು ಆತ್ಮೀಯವಾಗಿಸುತ್ತದೆ ಎನ್ನುವುದು ಊರಲ್ಲೇ ಇರುವವರಿಗಿಂತ ಪರಊರು, ಹೊರದೇಶಗಳಲ್ಲಿರುವವರಿಗೆ ಅದು ಅನುಭವದ ಸತ್ಯ. ಆದರೆ ಇದನ್ನು ತಿಳಿಯದ ನಮ್ಮ ಕಂಟ್ರಾಕ್ಟರರು ನಮ್ಮ ಸಾಮಾನ್ಯವಾದ ಪುರುಷ ಪ್ರಧಾನ ವ್ಯವಸ್ಥೆಯ ಚಿಂತನೆಯೊಂದಿಗೆ, ಅವರಿಬ್ಬರೂ ಬೇರೆ ಬೇರೆ ಧರ್ಮದವರಾಗಿದ್ದು ಆತ್ಮೀಯರಾಗಿರುವುದನ್ನು ಸಹಿಸದೆ ಹೋದ ಬಗ್ಗೆ ನನಗೆ ಮಂಗಳೂರಿನ ಸೌಹಾರ್ದತೆಯೊಳಗೆ ಬಿರುಕು ಉಂಟಾಗಲು ಶುರುವಾಗಿದೆಯೇ ಎಂಬ ಅನುಮಾನ ಹುಟ್ಟಿಕೊಂಡಿತು. ಯಾಕೆಂದರೆ ಇಂತಹ ಅನುಮಾನದ ಕ್ಷಣಗಳ ವಾಸ್ತವ ಚಿತ್ರವನ್ನು ಕೃಷ್ಣಾಪುರ, ಕಾಟಿಪಳ್ಳದಲ್ಲಿ ನೋಡಿದ್ದೇನಲ್ಲಾ. ನನ್ನ ಮಂಗಳೂರು ನನ್ನ ಬಾಲ್ಯದ ಮಂಗಳೂರಾಗಿ ಉಳಿದಿಲ್ಲವೇ? ಎಂಬ ಚಿಂತೆಯೂ ಉಂಟಾಯ್ತು.

 ನಮ್ಮ ಈ ಹೊಸ ಮನೆಯ ಹಿತ್ತಲ ಬಾಗಿಲ ಅಂಗಳದಲ್ಲಿ ಟಾಯ್ಲೆಟ್‌ಗಾಗಿ ಸೆಪ್ಟಿಕ್ ಟ್ಯಾಂಕ್‌ಗೆ ಗುಂಡಿ ತೋಡುತ್ತಿದ್ದರು. ಇದನ್ನು ಗಮನಿಸಿದ ವೈದ್ಯೆ ನನ್ನ ಬಳಿ ಅದು ಯಾವುದಕ್ಕಾಗಿ ಎಂದು ತಿಳಿದುಕೊಂಡರು. ಅದು ಟಾಯ್ಲೆಟ್‌ನ ಗುಂಡಿಗಾಗಿ ಎಂದು ತಿಳಿದಾಗ ಆ ಗುಂಡಿಯ ತಳಭಾಗ ಅವರ ನಿವೇಶನದಲ್ಲಿರುವ ಅವರ ಮನೆಯ ತಳಪಾಯದ ತಳಕ್ಕೆ ಸಮಾನವಾಗಿದ್ದು ಮಳೆಗಾಲದಲ್ಲಿ ಅದರಿಂದ ಭೂಮಿಗೆ ಇಂಗುವ ನೀರು ಹೆಚ್ಚಾಗಿ ಅವರ ಮನೆಯೊಳಗೆ ತಳಪಾಯದ ಮೂಲಕ ಸೇರುವ ಸಾಧ್ಯತೆ ಇದೆ ಎಂದು ತಿಳಿಸಿ ಅಲ್ಲಿ ಟಾಯ್ಲೆಟ್ ಗುಂಡಿ ಇಡಬೇಡಿ ಎಂದು ನಮ್ಮಲ್ಲಿ ತಿಳಿಸಿದರು. ನಾವು ಅದನ್ನು ಕಂಟ್ರಾಕ್ಟರ್‌ರಲ್ಲಿ ತಿಳಿಸಿದಾಗ ಅವರು ಅದಕ್ಕೆ ಒಪ್ಪಲಿಲ್ಲ. ಹಾಗಾಗಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಳ್ಳುವುದರ ಜೊತೆಗೆ ತನ್ನನ್ನು ಸಮರ್ಥಿಸಿಕೊಳ್ಳಲು ಇಂಜಿನಿಯರ್‌ರಿಂದಲೂ ನಮಗೆ ತಿಳಿ ಹೇಳಿದರು. ನಾವು ಎಷ್ಟೇ ಹೇಳಿದರೂ ಅವರು ತಮ್ಮ ಅಸಮಾಧಾನವನ್ನು ಅವರ ಮಾತು ಕೇಳದೆ ಇರಬಹುದಾದ ಈ ಅವಕಾಶವನ್ನು ಬಳಸಿಕೊಂಡು ಅವರಿಗೆ ಅವಮಾನ ಮಾಡಲು ಯತ್ನಿಸುತ್ತಿದ್ದರು. ನಮ್ಮವರು ಇಂಜಿನಿಯರ್ ಹೇಳಿದಾಗ ಒಪ್ಪಿಕೊಳ್ಳುವವರಿದ್ದರು.

ಜೊತೆಗೆ ಆಕೆ ನಾಳೆ ಇಲ್ಲಿ ಕಿಟಕಿ ಇಡಬೇಡಿ, ಇಲ್ಲಿ ಬಾಗಿಲಿ ಇಡಬೇಡಿ ಎನ್ನುವ ತಕರಾರು ಎಬ್ಬಿಸಬಹುದು. ಅವಳ ಸ್ವಭಾವವೇ ಹಾಗೇ ಎಂದಾಗ ನನಗೆ ಮತ್ತೆ ಈ ಎಲ್ಲಾ ಪುರುಷರಲ್ಲಿ ಅವರ ಪ್ರತಿಷ್ಠೆಯೇ ಮುಖ್ಯವಾದುದು ಗಮನಕ್ಕೆ ಬಂತು. ಈ ವಿಚಾರಗಳನ್ನೆಲ್ಲಾ ನಾನು ಆ ವೈದ್ಯೆಯೊಂದಿಗೆ ಚರ್ಚಿಸುತ್ತಿದ್ದೆ. ಆಗ ಅವರು ಅಸಹಾಯಕರಾಗಿ ನೀವು ನನ್ನ ಮಾತನ್ನು ಒಪ್ಪದಿದ್ದರೆ ತಾನು ಕಾರ್ಪೊರೇಷನ್‌ಗೆ ದೂರು ನೀಡುವುದಾಗಿ ತಿಳಿಸಿದರು. ನನಗೆ ವೃದ್ಯೆಯ ಮಾತು ಸರಿ ಎಂದೇ ಅನ್ನಿಸುತ್ತಿತ್ತು. ಇದಕ್ಕೆ ಹಂಪನಕಟ್ಟೆಯಲ್ಲಿನ ಡ್ರೈನೇಜ್‌ನ ಅವ್ಯವಸ್ಥೆಯ, ಉರ್ವಾಸ್ಟೋರಿನಲ್ಲಿದ್ದಾಗಿನ ನಮ್ಮ ಮನೆಯ ಡ್ರೈನೇಜ್‌ನ ಅವ್ಯವಸ್ಥೆಯೊಂದಿಗೆ ನಮ್ಮ ಕಾಲೇಜಿನ ಕೊಠಡಿಯೊಳಗೆ ಮಳೆಗಾಲದಲ್ಲಿ ಡ್ರೈನೇಜ್‌ನ ವಾಸನೆಯ ನೀರು ಬರುತ್ತಿದ್ದುದನ್ನು ನೋಡಿ ತಿಳಿದುಕೊಂಡಿದ್ದೆ. ಆದ್ದರಿಂದ ನಮ್ಮಿಂದಾಗಿ ಅವರಿಗೆ ಶಾಶ್ವತವಾದ ತೊಂದರೆ ಕೊಡಲು ನನಗಂತೂ ಮನಸ್ಸಿರಲಿಲ್ಲ. ನೆರೆಕರೆಯನ್ನು ಈಗಲೇ ನೆರೆಹೊರೆಯಾಗಿ ಭಾವಿಸುವುದಕ್ಕೆ ಅವಕಾಶ ಕೊಡಬಾರದು ಎಂಬ ಕಾರಣದಿಂದ ಕಂಟ್ರಾಕ್ಟರ್‌ರಲ್ಲಿ ನನ್ನ ಸೂಚನೆಯನ್ನು ತಿಳಿಸಿದೆ. ಇಲ್ಲಿನ ಮನೆಗಳಿಗೆ ಬೇಗನೆ ಡ್ರೈನೇಜ್ ವ್ಯವಸ್ಥೆ ಬರುತ್ತದೆ ಎನ್ನುವುದು ಕೂಡಾ ಇಲ್ಲಿ ಮನೆಕಟ್ಟುವವರಿಗೆ ಒಂದು ಸೌಲಭ್ಯ ಎನ್ನುವಂತೆ ತಿಳಿಸಲಾಗಿತ್ತು. ಆದ್ದರಿಂದ. ರಸ್ತೆಯಲ್ಲಿರುವ ಡ್ರೈನೇಜ್‌ಗೆ ನಮ್ಮ ಡ್ರೈನೇಜಿನ ಜೋಡಣೆಯಾಗಬೇಕಾದರೆ ನಮ್ಮ ಮನೆಯ ಹಿಂಭಾಗದ ಈ ಗುಂಡಿಯಿಂದ ರಸ್ತೆ ಬದಿಯವರೆಗೆ ಪೈಪ್ ಜೋಡಿಸಬೇಕಾಗುತ್ತದೆಯಲ್ಲಾ.

ಆಗ ಏನು ಮಾಡುವುದು ಎಂದು ಕೇಳಿದೆ. ಆಗ ಇಲ್ಲಿಂದ ಅಲ್ಲಿಗೆ ಮತ್ತೆ ಅಗೆದು ಜೋಡಿಸುವ ಬದಲು ಈಗಲೇ ರಸ್ತೆಗೆ ಸಮೀಪವಿರುವ ಎದುರು ಭಾಗದಲ್ಲೇ ಗುಂಡಿ ತೋಡಿದರೆ ಜೋಡಿಸಲು ಅನುಕೂಲವಲ್ಲವೇ? ಎನ್ನುವುದನ್ನು ಒತ್ತಾಯದಿಂದ ಸಮರ್ಥಿಸಿದಾಗ ಕಂಟ್ರಾಕ್ಟರರು ಅನಿವಾರ್ಯವಾಗಿ ಈ ವಾಸ್ತವವನ್ನು ಮರೆಸಲಾಗದೆ ಎದುರು ಭಾಗದಲ್ಲಿ ಗುಂಡಿ ತೋಡಿಸಿದರು. ಸಮಸ್ಯೆ ಬಗೆ ಹರಿಯಿತು. ಗುಂಡಿಯ ತಳಭಾಗದಿಂದಲೇ ಈಗಲೇ ಒಂದು ಪೈಪನ್ನು ಮುಂದೆ ಡ್ರೈನೇಜ್‌ಗೆ ಜೋಡಿಸಲು ಅನುಕೂಲವಾಗುವಂತೆಯೂ ಜೋಡಿಸಲಾಯಿತು. ಹಿಂಭಾಗದಲ್ಲಿ ಗುಂಡಿ ತೋಡಿದ್ದರಿಂದ ಕುಡಿಯುವ ನೀರಿಗೆ ಸಂಪ್ ಒಂದನ್ನು ಮಾಡುವ ಆಲೋಚನೆ ಇಲ್ಲದಿದ್ದರೂ, ಅದೀಗ ಅನಿವಾರ್ಯವಾಗಿ ಸಂಪ್‌ನ ವ್ಯವಸ್ಥೆಯಾಯಿತು. ಬಹುಶಃ ಬಡಾವಣೆಯಲ್ಲಿ ಮೊದಲಿಗೆ ನೀರಿಗಾಗಿ ಸಂಪ್ ಕಟ್ಟಿಸಿಕೊಂಡವರು ನಾವೇ ಆದೆವು. ಸಂಪ್‌ನ ಆವಶ್ಯಕತೆ ಇಲ್ಲ ಎಂದಿದ್ದ ಕಂಟ್ರಾಕ್ಟರರ ಮಾತು ಮುಂದೆ ನಾವು ವಾಸ್ತವ್ಯಕ್ಕೆ ಬಂದಾಗ ಸುಳ್ಳಾದುದು. ಹಾಗೆಯೇ ನಮ್ಮಲ್ಲಿ ಸಂಪ್ ಇದ್ದುದರಿಂದ ಅನುಕೂಲವಾದುದು. ಬಳಿಕ ಎಲ್ಲರೂ ಸಂಪ್ ಕಟ್ಟಿಕೊಂಡುದು ಎಲ್ಲವೂ ಒಂದು ವಿಚಾರವೇ ಆದುದಕ್ಕೆ ಆ ವೈದ್ಯೆಯ ದೂರದೃಷ್ಟಿಯೇ ಕಾರಣ. ಆಕೆಗೆ ಯಾರಿಗೂ ತೊಂದರೆ ಕೊಡಬೇಕಾದ ಉದ್ದೇಶವಿರಲಿಲ್ಲ ಎನ್ನುವುದೂ ಸತ್ಯ.

ನಮ್ಮ ಮನೆ ನಿರ್ಮಾಣ ಪೂರ್ಣಗೊಂಡು ನಾವು ವಾಸ್ತವ್ಯಕ್ಕೆ ಬರುವುದರೊಳಗೆ ವೈದ್ಯೆ ಆ ಚಿಕ್ಕ ಮನೆಯನ್ನು ಮಾರಾಟ ಮಾಡಿ ಇದೇ ಬಡಾವಣೆಯ ಇನ್ನೊಂದು ದಿಕ್ಕಿನಲ್ಲಿ ಬೇರೆಯವರಿಂದ ನಿವೇಶನ ಖರೀದಿಸಿ ತಾನೇ ನಿಂತು ಬೇರೆ ಇಂಜಿನಿಯರ್, ಕಂಟ್ರಾಕ್ಟರ್‌ಗಳ ಸಹಾಯದಿಂದ ಬಹು ಸುಂದರವಾದ ಮಹಡಿಯ ಮನೆ ಕಟ್ಟಿಸಿಕೊಂಡು ನಮ್ಮ ನೆರೆಯಿಂದ ದೂರವಾಗಿದ್ದರು. ತನ್ನ ಮನೆಯಲ್ಲೇ ಕ್ಲಿನಿಕನ್ನೂ ತೆರೆದು ತಮ್ಮ ವೃತ್ತಿಯನ್ನೂ ಪ್ರಾರಂಭಿಸಿದ್ದರು. ನಾವು ಈ ಬಡಾವಣೆಗೆ ಬಂದಾಗ ನಮ್ಮ ಕುಟುಂಬದ ವೈದ್ಯೆಯೂ ಆದರು. ಇಂದಿಗೂ ಅವರ ಸ್ನೇಹ ಹಾಗೆ ಉಳಿದಿದೆ. ಅವರು ಮುಂದೆ ಇಲ್ಲಿನ ಮನೆಯನ್ನೂ ಮಾರಾಟ ಮಾಡಿ ದೊಡ್ಡ ಹಿತ್ತಲು ಉಳ್ಳ ಮನೆಯನ್ನು ಕೊಂಡು ಕೊಂಡು ಈ ಬಡಾವಣೆಯಿಂದಲೇ ದೂರ ಹೋದುದು ನನ್ನಂತಹ ಕೆಲವರಿಗೆ ಬೇಸರದ ವಿಷಯವೂ ಹೌದು.

ಒಂಟಿ ಮಹಿಳೆಯಾಗಿ ಅವರು ತೋರಿದ ಧೈರ್ಯ, ತಾನೇ ನಿಂತು ಮನೆ ಕಟ್ಟಿಸಿದ ರೀತಿ, ಆಕೆಯ ನೇರ ನಡೆನುಡಿ ಈ ಬಡಾವಣೆಯ ಸಾಂಪ್ರದಾಯಿಕ ಮನಸ್ಸುಗಳಿಗೆ ಒಗ್ಗದೆ ಹೋದುದೂ ನಿಜ. ವಿದ್ಯಾವಂತರಾದ ಮಾತ್ರಕ್ಕೆ ಅವರು ಪ್ರಾಮಾಣಿಕರಾಗಿಯೇ ಇರುತ್ತಾರೆ. ತಿಳುವಳಿಕೆಯುಳ್ಳವರಾಗಿರುತ್ತಾರೆ ಎನ್ನುವ ನನ್ನ ಅಭಿಪ್ರಾಯ ಸುಳ್ಳು ಎನ್ನುವುದೂ ತಿಳಿದುದರಿಂದ ಇಲ್ಲಿ ಬಂದ ಮೇಲೆ ಹೇಗಿರಬೇಕು ಎನ್ನುವುದಕ್ಕೆ ವೈದ್ಯೆಯ ನಡೆನುಡಿ ನನಗೆ ಮುನ್ಸೂಚನೆ ನೀಡಿದಂತಾಯಿತು. ಎಚ್ಚರಿಕೆಯನ್ನು ತಿಳಿಸಿದಂತೆಯೂ ಆಯ್ತು. ಹೆಣ್ಣು ಉದ್ಯೋಗಸ್ಥೆಯಾಗಿದ್ದಾಗ, ಒಂಟಿಯಾಗಿ ಬದುಕು ನಿರ್ವಹಿಸುವ ಆಕೆಯ ಸಾಮರ್ಥ್ಯವನ್ನು, ಸ್ವಾಭಿಮಾನವನ್ನು ಅಹಂಕಾರವೆಂದೇ ಭಾವಿಸುವ ಸಮಾಜ ಇದ್ದಲ್ಲಿ ಕೌಟುಂಬಿಕ ಸ್ವಾಸ್ಥವೂ ಕೆಡುತ್ತದೆ ಎನ್ನುವುದರ ಅರಿವು ವಿದ್ಯಾವಂತರಿಗೂ ಇಲ್ಲದಿರುವುದು ನಿಧಾನವಾಗಿ ಅರಿವಾಗಲೂ ಇಲ್ಲಿನ ವಾಸ್ತವ್ಯದ ಅನುಭವಗಳು ಕಾರಣವಾದುವು.

ಅಂತೂ ಮನೆ ನಿರ್ಮಾಣದ ಕಾರ್ಯ ಸಂಪೂರ್ಣವಾಯಿತು. ‘‘ಮದುವೆ ಆಗಿ ನೋಡು, ಮನೆ ಕಟ್ಟಿ ನೋಡು’’ ಎಂಬ ಗಾದೆಯಲ್ಲಿನ ಸ್ವಂತ ಮನೆ ಹಿತ್ತಿಲು ಕೊಂಡ ಅನುಭವಗಳೇ ಬೇರೆ, ಮನೆ ಕಟ್ಟಿಸುವ ಅನುಭವಗಳೇ ಬೇರೆ ಎನ್ನುವುದು ತಿಳಿಯಿತು. ಈ ಅನುಭವಗಳು ಅನುಭವಗಳೆನ್ನುವುದಕ್ಕಿಂತ ದೇಹ ಮನಸ್ಸುಗಳ ಶಕ್ತಿಯೆಲ್ಲವನ್ನೂ ಪೂರ್ಣವಾಗಿ ಉಡುಗಿಸಿತ್ತು. ನಾನಂತೂ ಸೋತು ಸುಣ್ಣವಾಗಿದ್ದೆ. ನಡೆಯಲೂ ಶಕ್ತಿ ಇಲ್ಲದಂತಹ ಪರಿಸ್ಥಿತಿಯಲ್ಲಿ ಕಷ್ಣಾಪುರದಿಂದ ಮಂಗಳೂರಿನ ಕಾಲೇಜಿಗೆ ಬರುವಲ್ಲಿ ಇನ್ನು ನನ್ನಿಂದ ಸಾಧ್ಯವಿಲ್ಲ ಎನ್ನುವಷ್ಟು ಆರೋಗ್ಯಸ್ಥಿತಿ ಹದಗೆಟ್ಟಿತ್ತು. ಹೊಸ ಮನೆ ಕಟ್ಟಿಸಿದ ಸಂಭ್ರಮ ಮನಸ್ಸಿಗೇ ಸಂತೋಷ ನೀಡದೆ ಇದ್ದಾಗ ದೇಹಕ್ಕೆ ಎಲ್ಲಿಂದ ಉಲ್ಲಾಸ ದೊರೆಯಬೇಕು. ಆದ್ದರಿಂದ ಆದಷ್ಟು ಬೇಗ ಮಂಗಳೂರು ಸೇರಿದರೆ ನಗರದಿಂದ 5 ಕಿ.ಮೀ. ದೂರವನ್ನು ಹೇಗಾದರೂ ಸುಧಾರಿಸಿಕೊಳ್ಳಬಹುದು ಎಂಬಾಸೆಯೇ ನನ್ನ ಆತ್ಮಸ್ಥೈರ್ಯವನ್ನು ಕಾಪಿಟ್ಟಿತ್ತು.

ಈ ಮನೆ ಕಟ್ಟಿಸಿದ ಕಾರಣದಿಂದ ಅನೇಕ ರೀತಿಯ ವ್ಯವಹಾರ ಕ್ಷೇತ್ರಗಳ, ಕಚೇರಿಗಳ, ವ್ಯಕ್ತಿಗಳ ಪರಿಚಯ, ತಿಳುವಳಿಕೆ ಹೆಚ್ಚಿದುದು ನನ್ನ ವ್ಯಕ್ತಿತ್ವದ ಗಟ್ಟಿತನಕ್ಕೆ ಕಾರಣವಾದುದು ಮಾತ್ರ ನಿಜವೇ. ಬಂದರಿನ ರಸ್ತೆಗಳ ಪರಿಚಯದೊಂದಿಗೆ ಮರಮುಟ್ಟುಗಳೆಂದರೇನು, ಸಿಮೆಂಟು, ಜಲ್ಲಿ, ಹೊಗೆ, ಬಡಗಿ ಕೆಲಸ, ಕಬ್ಬಿಣದ ಕೆಲಸ, ಗಾರೆ ಕೆಲಸ, ಮೊಸಾಯಿಕ್‌ನಂತಹ ಕುಸುರಿ ಕೆಲಸಗಳನ್ನು ಕಣ್ಣಾರೆ ತುಂಬಿಕೊಂಡದ್ದು, ಇಲೆಕ್ಟ್ರೀಶಿಯನ್, ಪ್ಲಂಬರ್‌ಗಳ ಕೆಲಸದೊಂದಿಗೆ ಇಂತಹ ಶ್ರಮಜೀವಿಗಳ ಬದುಕಿನ ಪರಿಚಯವೂ ಆಯ್ತು. ಮನೆ ಒಕ್ಕಲಿಗೆ ಮುಹೂರ್ತ ನೋಡುವ ಅಗತ್ಯ ಇಲ್ಲದ ನಾವು ಎಪ್ರಿಲ್ ತಿಂಗಳ ವಾರ್ಷಿಕ ರಜೆ ಪ್ರಾರಂಭವಾಗುವವರೆಗೂ ನಿರ್ಧಾರ ಮಾಡದೆ ಉಳಿದೆವು.

ಎಪ್ರಿಲ್ ತಿಂಗಳಲ್ಲಿ ಪಿಯುಸಿ, ಪಬ್ಲಿಕ್ ಪರೀಕ್ಷೆಯ ಕೆಲಸಗಳೂ ಕಡ್ಡಾಯ. ಈ ಹಿನ್ನೆಲೆಯಲ್ಲೇ ದಿಢೀರ್ ನಿರ್ಧಾರಕ್ಕೆ ಬಂದ ನಾವು ಪರೀಕ್ಷಾ ಕಾರ್ಯ ಮುಗಿದ ಬಳಿಕ ಎಪ್ರಿಲ್ ಕೊನೆಯಲ್ಲಿ ನಮ್ಮ ವಿವಾಹದ ದಿನವನ್ನೇ ಆಯ್ಕೆ ಮಾಡಿಕೊಂಡು ಸಮೀಪದ ಬಂಧು ಮಿತ್ರರಿಗೆ, ಸ್ನೇಹಿತರಿಗೆ ಪತ್ರ ಮೂಲಕ ತಿಳಿಸಿದೆವು. ಈ ಸಂದರ್ಭದಲ್ಲಿ ಹೋಗಿ ಆಹ್ವಾನಿಸಿಲ್ಲ ಎಂದು ಅಸಮಾಧಾನಗೊಂಡವರೂ ಇದ್ದಾರೆ. ಎಲ್ಲರನ್ನೂ ಒಂದೇ ದಿನ ಸುಧಾರಿಸಲು ಕಷ್ಟವಾಗುವ ಹಿನ್ನೆಲೆ ನಮ್ಮದಾದರೂ ನಾವು ಯೋಚಿಸಿಕೊಂಡ ಕಾರ್ಯಕ್ರಮಗಳು ಎಲ್ಲರಿಗೂ ಇಷ್ಟವಿಲ್ಲದ ಕಾರ್ಯಕ್ರಮಗಳೆನ್ನುವ ಹಿನ್ನೆಲೆಯಲ್ಲಿ ಮೊದಲ ದಿನ ಹಾಲುಕ್ಕಿಸುವ ಮೂಲಕ ಮನೆ ಒಕ್ಕಲಿಗೆ ಬಂಧುಗಳಿಗೆ, ಮರುದಿನ ಪುಸ್ತಕ ಬಿಡುಗಡೆಯ ದಿನಕ್ಕೆ ಸಾಹಿತ್ಯಾಸಕ್ತ ಸ್ನೇಹಿತರಿಗೆ, ಸಹೋದ್ಯೋಗಿಗಳಿಗೆ ಅವರ ಆಯ್ಕೆಗೆ ಬಿಟ್ಟು ಆಹ್ವಾನಿಸಿದ್ದಾಯ್ತು.

ಹಾಲುಕ್ಕಿಸುವುದು ಎಂದರೆ ಹಾಲು ಸಮೃದ್ಧವಾಗಿ ಮನೆಯಲ್ಲಿರಬೇಕು. ಮನೆಗೆ ಯಾರು ಯಾವ ಹೊತ್ತು ಬಂದರೂ ಒಂದು ಲೋಟ ಹಾಲು ನೀಡುವ, ಹಾಲಿನಂತೆ ಶುದ್ಧವಾದ ಮನಸ್ಸಿರಬೇಕು ಎನ್ನುವುದು ಈ ಆಚರಣೆಯ ಅರ್ಥ ತಾನೇ! ಮರುದಿನದ ಪುಸ್ತಕ ಬಿಡುಗಡೆ ನಾವಿಬ್ಬರೂ ಸಾಹಿತಿಗಳಾಗಿರುವ ಸಾಧನೆಯಲ್ಲಿ ಮತ್ತು ಈಗಾಗಲೇ ಹೇಮಾಂಶು ಪ್ರಕಾಶನ ಎನ್ನುವ ಹೆಸರಲ್ಲಿ ನಮ್ಮ ಸ್ನೇಹಿತರ ವಲಯದ ಪುಸ್ತಕ ಪ್ರಕಟನೆ, ಬಿಡುಗಡೆ, ಮಾರಾಟ ವ್ಯವಸ್ಥೆಯನ್ನು ಮಾಡುತ್ತಿದ್ದುದರಿಂದ ಆ ಕಾಯಕವೂ ನಿರಂತರ ನಡೆಯಬೇಕು ಎನ್ನುವುದು ನಮ್ಮ ಆಶಯ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಹೊಸ ಮನೆ ಒಕ್ಕಲ ಸರಳ ಸಂಭ್ರಮ ನಡೆದು ಒಂದು ಹಂತದ ಪರಿಶ್ರಮಕ್ಕೆ ಪೂರ್ಣವಿರಾಮ ಅಸಾಧ್ಯವಾದುದಾಗಿ ಅಲ್ಪ ವಿರಾಮ ನೀಡಿ ನಿಟ್ಟುಸಿರುಬಿಟ್ಟೆ.

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News