ಹುತಾತ್ಮ ಯೋಧರ ವಿಷಯದಲ್ಲೂ ಕೋಮುವಾದ ಸಲ್ಲದು: ಸೇನಾಧಿಕಾರಿ

Update: 2018-02-14 16:45 GMT

ಜಮ್ಮು, ಫೆ.14: ಹುತಾತ್ಮ ಯೋಧರಲ್ಲೂ ಕೋಮುವಾದ ಮಾಡುವ ಧೋರಣೆ ಸಲ್ಲದು . ಯೋಧರೆಲ್ಲರೂ ದೇಶಸೇವೆಯ ಗುರಿಯನ್ನು ಹೊಂದಿರುತ್ತಾರೆ ಎಂದು ಸೇನಾಪಡೆಯ ನಾರ್ಥರ್ನ್ ಕಮಾಂಡ್ ಚೀಫ್ ಜ ದೇವರಾಜ್ ಅನ್ಬು ತಿಳಿಸಿದ್ದಾರೆ. ನಾವು ಹುತಾತ್ಮ ಯೋಧರ ವಿಷಯದಲ್ಲಿ ಎಂದಿಗೂ ಜಾತಿವಾದ ಮಾಡುವುದಿಲ್ಲ. ಸೇನಾಪಡೆಯ ಬಗ್ಗೆ ಏನೂ ತಿಳಿಯದವರು ಈ ರೀತಿಯ ಹೇಳಿಕೆ ನೀಡುತ್ತಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಮುಸ್ಲಿಮರ ದೇಶಪ್ರೇಮವನ್ನು ಪ್ರಶ್ನಿಸುವವರು , ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಹೆಚ್ಚಿನ ಯೋಧರು ಮುಸ್ಲಿಮರು ಎಂಬುದನ್ನು ಯಾಕೆ ನೆನಪಿಸಿಕೊಳ್ಳುವುದಿಲ್ಲ ಎಂದು ಹೈದರಾಬಾದ್‌ನ ಸಂಸದ ಅಸಾದುದ್ದಿನ್ ಉವೈಸಿ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಅವರು ಪ್ರತಿಕ್ರಿಯೆ ನೀಡಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತ್ಯೇಕತಾವಾದಿ ನಿಲುವನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತಿರುವ ಬಗ್ಗೆ ಹಾಗೂ ಜಮ್ಮು-ಕಾಶ್ಮೀರದಲ್ಲಿ ಯುವಜನತೆ ಭಯೋತ್ಪಾದನಾ ಕೃತ್ಯಗಳತ್ತ ಆಕರ್ಷಿತವಾಗುತ್ತಿರುವ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು.  ಇದರಿಂದ ಜನಸಾಮಾನ್ಯರಿಗೆ ತೊಂದರೆ ಮಾತ್ರ ಆಗುವುದಲ್ಲದೆ ಯಾರಿಗೂ ಒಳಿತಾಗದು ಎಂದ ಅವರು, ಭಯೋತ್ಪಾದಕರ ಮುಖಂಡರನ್ನು ಗುರುತಿಸಿ ಅವರನ್ನು ಬಗ್ಗುಬಡಿಯುವುದು ಸೇನಾಪಡೆಯ ಆದ್ಯತೆಯಾಗಿದೆ ಎಂದು ಹೇಳಿದರು. ಇದೀಗ ಗಡಿಯಲ್ಲಿ ಹೋರಾಡಲು ಸಾಧ್ಯವಾಗದೆ ಹತಾಶರಾಗಿರುವ ಶತ್ರುಗಳು ಸುಲಭ ಗುರಿಯಾದ ಶಿಬಿರದ ಮೇಲೆ ಆಕ್ರಮಣ ನಡೆಸಲು ಮುಂದಾಗಿದ್ದಾರೆ. ಜೈಷೆ ಮುಹಮ್ಮದ್, ಲಷ್ಕರೆ ತಯ್ಯಿಬ, ಹಿಝ್‌ಬುಲ್ ಮುಜಾಹಿದೀನ್. ಇವೆಲ್ಲಾ ಒಟ್ಟಾಗಿ ಕಾರ್ಯನಿರ್ವಹಿಸುವ ಭಯೋತ್ಪಾದಕ ಸಂಘಟನೆಗಳು. ಒಂದು ಸಂಘಟನೆಯಿಂದ ಇನ್ನೊಂದು ಸಂಘಟನೆಗೆ ಹಾರುತ್ತಾ ದೇಶವಿರೋಧಿ ಕೃತ್ಯ ನಡೆಸುವುದೇ ಇದರ ಸದಸ್ಯರ ಕಾರ್ಯವಾಗಿದೆ. ಒಂದಂತೂ ಸ್ಪಷ್ಟವಾಗಿದೆ. ಶಸ್ತ್ರಾಸ್ತ್ರ ಕೈಗೆತ್ತಿಕೊಂಡು ದೇಶದ ವಿರುದ್ಧ ಕಾರ್ಯ ನಿರ್ವಹಿಸುವವರು ಭಯೋತ್ಪಾದಕರು ಮತ್ತು ಅವರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದು ಸೇನೆಗೆ ತಿಳಿದಿದೆ ಎಂದು ದೇವರಾಜ್ ಅನ್ಬು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News