ಮಲಗುಂಡಿ ಸ್ವಚ್ಚಗೊಳಿಸುವ ವೇಳೆ 7 ಮಂದಿ ಕಾರ್ಮಿಕರು ಮೃತ್ಯು

Update: 2018-02-16 15:05 GMT

ಹೈದರಾಬಾದ್, ಫೆ. 15: ಮಲಗುಂಡಿ ಸ್ವಚ್ಛಗೊಳಿಸಲು ಇಳಿದ ಏಳು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಶುಕ್ರವಾರ ಸಂಭವಿಸಿದೆ.

ಜಿಲ್ಲೆಯ ಮೊರಾಮ್ ಗ್ರಾಮದಲ್ಲಿರುವ ಶ್ರೀ ವೆಂಕಟೇಶ್ವರ ಹೇಟ್ಚರಿ ಲಿಮಿಟೆಡ್‌ನ ಮಲಗುಂಡಿ ಸ್ವಚ್ಛಗೊಳಿಸಲು ಆರಂಭದಲ್ಲಿ ನಾಲ್ಕು ಮಂದಿ ಕಾರ್ಮಿಕರು ಇಳಿದಿದ್ದರು. ಆದರೆ, ಅವರು ವಿಷಗಾಳಿ ಸೇವನೆಯಿಂದ ಅಸ್ವಸ್ಥರಾದರು. ಅವರಿಗೆ ಮಲಗುಂಡಿಯಿಂದ ಹೊರಬರಲು ಸಾಧ್ಯವಾಗದೇ ಇದ್ದಾಗೆ ಅವರನ್ನು ಮೇಲೆತ್ತಲು ಇನ್ನು ನಾಲ್ಕು ಮಂದಿ ಕಾರ್ಮಿಕರು ಮಲ ಗುಂಡಿ ಒಳಗೆ ಇಳಿದರು. ಆದರೆ, ಅವರು ಕೂಡ ವಿಷ ಗಾಳಿ ಸೇವನೆಯಿಂದ ಅಸ್ವಸ್ಥಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

   ಘಟನೆ ಸಂಭವಿಸಿದ ಕೂಡಲೇ ಶ್ರೀ ವೆಂಕಟೇಶ್ವರ ಹೇಟ್ಚರಿ ಲಿಮಿಟೆಡ್‌ನ ಭದ್ರತಾ ಆಡಳಿತಾಧಿಕಾರಿ ಜನರನ್ನು ಕೂಗಿ ಕರೆದರು. ಕೂಡಲೇ ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿ ಮಲಗುಂಡಿ ಒಡೆದು ಎಲ್ಲ ಕಾರ್ಮಿಕರನ್ನು ಮೇಲೆಕ್ಕೆತ್ತಿದರು. ಇವರಲ್ಲಿ ಓರ್ವ ಮೃತಪಟ್ಟಿದ್ದು, ಏಳು ಮಂದಿ ತೀವ್ರ ಅಸ್ವಸ್ಥರಾಗಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಇವರಲ್ಲಿ ಮೂವರು ರಸ್ತೆ ಮಧ್ಯೆ ಮೃತಪಟ್ಟರು. ಉಳಿದ ನಾಲ್ವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅವರಲ್ಲಿ ಮೂವರು ಅನಂತರ ಮೃತಪಟ್ಟರು.

 8 ಮಂದಿಯಲ್ಲಿ ಓರ್ವ ಮಾತ್ರ ಬದುಕುಳಿದಿದ್ದು, ಆತನನ್ನು ಶಿವ ಎಂದು ಗುರುತಿಸಲಾಗಿದೆ. ಆತನ ಆರೋಗ್ಯ ಸ್ಥಿರವಾಗಿದೆ. ಮೃತಪಟ್ಟವರನ್ನು ರೆಡ್ಡಪ್ಪ, ರಾಮಚಂದ್ರ, ಕೇಶವ, ರಮೇಶ, ಗೋವಿಂದ ಸ್ವಾಮಿ, ಬಾಬು ಹಾಗೂ ವೆಂಕಟ್ ರಾಜು ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  ಮಲಗುಂಡಿಯ ಒಳಗೆ ಕಾರ್ಮಿಕರನ್ನು ಇಳಿಸುವ ಮುನ್ನ ಹ್ಯಾಟ್ಚರಿಯ ಸ್ವಚ್ಛತಾ ಉಸ್ತುವಾರಿ ಅಧಿಕಾರಿ ಮಲಗುಂಡಿಯ ಒಳಗಿನ ವಸ್ತುಸ್ಥಿತಿ ಅರಿತುಕೊಂಡಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ನಿರ್ಲಕ್ಷದ ಕಾರಣದಿಂದ ಸಾವು ಸಂಭವಿಸಿರುವುದಾಗಿ ಪ್ರಕರಣ ದಾಖಲಿಸಲಾಗಿದೆ. ಘಟನೆ ನಡೆದ ಕೂಡಲೇ ಘಟಕದ ಮ್ಯಾನೇಜರ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತರ ಕುಟುಂಬಕ್ಕೆ ಸರಕಾರ ಎಲ್ಲ ನೆರವು ನೀಡಲಿದೆ ಎಂದು ಆರೋಗ್ಯ ಸಚಿವ ಡಾ. ಕಾಮಿನೇನಿ ಶ್ರೀನಿವಾಸ್ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News