ಉತ್ತರ ಪ್ರದೇಶ ಬಜೆಟ್‌ನಲ್ಲಿ ಗೋಶಾಲೆಗಳಿಗೆ 98.5 ಕೋ.ರೂ.

Update: 2018-02-16 15:12 GMT

ಲಕ್ನೋ,ಫೆ.16: ಉತ್ತರ ಪ್ರದೇಶದ 2018-19ನೇ ಸಾಲಿನ ಮುಂಗಡಪತ್ರವನ್ನು ಶುಕ್ರವಾರ ಮಂಡಿಸಲಾಗಿದ್ದು, ಆದಿತ್ಯನಾಥ್ ಸರಕಾರವು ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ ಬಿಡಾಡಿ ದನಗಳಿಗಾಗಿ ಗೋಶಾಲೆಗಳ ನಿರ್ವಹಣೆಗಾಗಿ 98.5 ಕೋ.ರೂ. ಗಳನ್ನು ನಿಗದಿಗೊಳಿಸಿದೆ.

ಬಿಡಾಡಿ ದನಗಳಿಂದಾಗಿ ಬೆಳೆ ನಾಶವಾಗಿ ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ರಾಜ್ಯಾದ್ಯಂತ ಹಂತಹಂತವಾಗಿ ಗೋಶಾಲೆಗಳನ್ನು ತೆರೆಯಲು ಸರಕಾರವು ನಿರ್ಧರಿಸಿದೆ ಎಂದು ಆದಿತ್ಯನಾಥ್ ಅವರು ಹಣಕಾಸು ಸಚಿವ ರಾಜೇಶ ಅಗರವಾಲ್ ಅವರಿಂದ ಬಜೆಟ್ ಮಂಡನೆಯ ಬಳಿಕ ತಿಳಿಸಿದರು.

 ಗೋಶಾಲೆಗಳನ್ನು ಆರಂಭದಲ್ಲಿ ನಗರ ಪ್ರದೇಶಗಳಲ್ಲಿ ಮತ್ತು ನಂತರ ತಾಲೂಕು ಹಾಗೂ ಗ್ರಾಮಮಟ್ಟಗಳಲ್ಲಿ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಕಳೆದ ವರ್ಷದ ಮಾರ್ಚ್‌ನಲ್ಲಿ ಆದಿತ್ಯನಾಥ್ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಅಕ್ರಮ ಕಸಾಯಿಖಾನೆಗಳ ಮೇಲೆ ದಾಳಿಗಳು ಆರಂಭಗೊಂಡಿದ್ದು, ಬಿಡಾಡಿ ದನಗಳ ಸಂಖ್ಯೆ ಹೆಚ್ಚಿದೆಯೆನ್ನಲಾಗಿದೆ.

ಈ ತಿಂಗಳ ಆರಂಭದಲ್ಲಿ ವೃಂದಾವನದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂದರ್ಭ ಆದಿತ್ಯನಾಥ್, ನಾವು ದನಗಳನ್ನು ಹತ್ಯೆಯಾಗುವುದರಿಂದ ರಕ್ಷಿಸಿದ್ದೇವೆ ಮತ್ತು ಈಗ ಅವುಗಳ ಪೋಷಣೆಗಾಗಿ ಸೂಕ್ತ ಮಾರ್ಗವನ್ನು ಕಂಡುಕೊಳ್ಳುತ್ತೇವೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News