ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಆದಾಯದ ಮೂಲ ಬಹಿರಂಗಪಡಿಸಬೇಕು: ಸುಪ್ರೀಂ ಕೋರ್ಟ್

Update: 2018-02-16 15:15 GMT

ಹೊಸದಿಲ್ಲಿ, ಫೆ. 15: ಚುನಾವಣೆಗೆ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳು ತನ್ನ, ತನ್ನ ಪತ್ನಿ ಹಾಗೂ ಅವಲಂಬಿತ ಮಕ್ಕಳದ್ದು ಸೇರಿದಂತೆ ಆದಾಯ ಮೂಲ ಬಹಿರಂಗಪಡಿಸುವಂತೆ ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ನಿರ್ದೇಶಿಸಿದೆ.

 ಮಹತ್ವದ ತೀರ್ಪೊಂದರಲ್ಲಿ ನ್ಯಾಯಮೂರ್ತಿ ಜೆ. ಚಲಮೇಶ್ವರ್ ನೇತೃತ್ವದ ಪೀಠ, ಚುನಾವಣೆಗೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಅವರು ಹಾಗೂ ಅವರ ಪತ್ನಿ, ಅವಲಂಬಿತ ಮಕ್ಕಳ ಆದಾಯದ ಮೂಲ ಬಹಿರಂಗಪಡಿಸಬೇಕು ಎಂದು ಹೇಳಿದೆ.

ನಾಮಪತ್ರದಲ್ಲಿ ಆದಾಯ ಮೂಲದ ವಿವರ ಕೋರುವ ಕಲಮುಗಳನ್ನು ಒಳಗೊಳಿಸುವಂತೆ ಕೋರಿ ಸರಕಾರೇತರ ಸಂಸ್ಥೆ ಲೋಕ್ ಪ್ರಹಾರಿ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.

ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಅವರ, ಅವರ ಪತ್ನಿ ಹಾಗೂ ಮಕ್ಕಳ ಸೊತ್ತಿನ ವಿವರವನ್ನು ಮಾತ್ರ ಬಹಿರಂಗಪಡಿಸುತ್ತಾರೆ. ಆದರೆ, ಆದಾಯದ ಮೂಲವನ್ನು ಬಹಿರಂಗಪಡಿಸುವುದಿಲ್ಲ ಎಂದು ದೂರುದಾರರು ಪ್ರತಿಪಾದಿಸಿದ್ದಾರೆ.

ಪ್ರಸಕ್ತ ಕಾನೂನಿನ ಪ್ರಕಾರ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಅವರ, ಅವರ ಪತ್ನಿ ಹಾಗೂ ಮಕ್ಕಳ ಸೊತ್ತು ಹಾಗೂ ಬಾಧ್ಯತೆಗಳ ವಿವರವನ್ನು ಬಹಿರಂಗಪಡಿಸುವ ಅಗತ್ಯತೆ ಇದೆ. ಆದರೆ, ಅವರ ಆದಾಯದ ಮೂಲವನ್ನಲ್ಲ.

ರಾಜಕಾರಣಿಗಳು ನಾಮಪತ್ರದಲ್ಲಿ ಬಹಿರಂಗಪಡಿಸಿದ ಸೊತ್ತಿಗಿಂತ ಶೇ. 500ರಷ್ಟು ಏರಿಕೆಯಾಗಿರುವುದರ ತನಿಖೆ ನಡೆಸದಿರುವ ಬಗ್ಗೆ ಈ ಹಿಂದೆ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News