2019ರ ಮಹಾಪರೀಕ್ಷೆಗೆ ಸಿದ್ಧವಾಗಿದ್ದೀರಾ ಎಂಬ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಪ್ರಧಾನಿ ಉತ್ತರಿಸಿದ್ದು ಹೀಗೆ….

Update: 2018-02-16 15:24 GMT

ಹೊಸದಿಲ್ಲಿ, ಫೆ.16: ತಾನು ಸ್ವಭಾವತಃ ರಾಜಕಾರಣಿಯಲ್ಲ. ರಾಜಕೀಯ ಕ್ಷೇತ್ರಕ್ಕೆ ತಡವಾಗಿ ಪ್ರವೇಶಿಸಿದ್ದು ರಾಜಕೀಯಕ್ಕೆ ಹೊರಗಿನ ವ್ಯಕ್ತಿಯೆಂದು ಭಾವಿಸುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

 ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ, ರಾಜಕೀಯ ವ್ಯವಸ್ಥೆಯಲ್ಲಿದ್ದರೂ ತಾನು ಸ್ವಭಾವತಃ ರಾಜಕಾರಣಿಯಲ್ಲ. ಏನಾದರೊಂದು ಕಾರ್ಯದಲ್ಲಿ ತೊಡಗಿಕೊಂಡಿರುವುದು ತನ್ನ ಸ್ವಭಾವವಾಗಿದೆ ಎಂದರು.

  ದಿಲ್ಲಿಯ ಜವಾಹರ್ ನವೋದಯ ವಿದ್ಯಾಲಯದ 11ನೇ ತರಗತಿಯ ದಿಲೀಪ್ ಎಂಬ ವಿದ್ಯಾರ್ಥಿ , “ನೀವು ಮುಂದಿನ ಮಹಾ ಪರೀಕ್ಷೆ(ಲೋಕಸಭಾ ಚುನಾವಣೆ)ಗೆ ಸಿದ್ಧವಾಗಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೋದಿ, ತನಗೆ 125 ಕೋಟಿ ಭಾರತೀಯರ ಆಶೀರ್ವಾದವಿದ್ದು, ಚುನಾವಣೆಯ ಫಲಿತಾಂಶ ಎಂಬುದು ತಾನು ಮಾಡಿರುವ ಕಾರ್ಯಗಳ ಪ್ರತಿಫಲವಾಗಿರುತ್ತದೆ” ಎಂದು ನಂಬಿರುವುದಾಗಿ ತಿಳಿಸಿದರು. “ನಿಮಗೆ ವರ್ಷಕ್ಕೊಮ್ಮೆ ಪರೀಕ್ಷೆಯಾದರೆ ನಮಗೆ ದಿನದ 24 ಗಂಟೆಯೂ ಪರೀಕ್ಷೆಯಾಗಿರುತ್ತದೆ” ಎಂದರು.

ಅಲ್ಲದೆ ಪ್ರಶ್ನೆ ಕೇಳಿದ ವಿದ್ಯಾರ್ಥಿಯನ್ನುದ್ದೇಶಿಸಿ ಕಿವಿ ಮಾತು ಹೇಳಿದ ಮೋದಿ, ವಿದ್ಯಾರ್ಥಿಗಳು ಅಧ್ಯಯನದ ಕಡೆ ಗಮನ ನೀಡುತ್ತಾರೆಂದು ತಾನು ನಂಬಿದ್ದೇನೆ. ಕಲಿಯುವ ಕಡೆಗೆ ಮಾತ್ರ ವಿದ್ಯಾರ್ಥಿಗಳ ಗಮನ ಇರಬೇಕು. ನಿಮ್ಮೊಳಗಿನ ವಿದ್ಯಾರ್ಥಿಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕ್ರಿಯಾಶೀಲನನ್ನಾಗಿ ಮಾಡಬೇಕು. ಕ್ರಿಯಾಶೀಲತೆ ಜೀವನದ ಕ್ರಮವಾಗಿದ್ದರೆ ಪರೀಕ್ಷೆ, ಫಲಿತಾಂಶ, ಅಂಕ ಇವೆಲ್ಲಾ ಉಪಉತ್ಪನ್ನವಾಗಿ ಲಭಿಸುತ್ತದೆ ಎಂದರು.

   ಕೇವಲ ಅಂಕ ಗಳಿಕೆಯ ಬಗ್ಗೆ ಮಾತ್ರ ಗಮನ ಇದ್ದರೆ ನೀವು ಏನನ್ನೂ ಸಾಧಿಸಲು ಆಗದು. ರಾಜಕೀಯದಲ್ಲಿ ಇದೇ ಸೂತ್ರವನ್ನು ತಾನು ಅಳವಡಿಸಿಕೊಂಡಿರುವುದಾಗಿ ಮೋದಿ ಹೇಳಿದರು. ಸೋಲನ್ನು ಸ್ವೀಕರಿಸಲಾರೆ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಒಂದು ಕವನದಲ್ಲಿ ಹೇಳಲಾಗಿದೆ. ಇಂತಹ ಚಿಂತನಾಲಹರಿ ಎಲ್ಲರಲ್ಲಿ ಇರಬೇಕು ಎಂದ ಅವರು, ಈ ಹಿಂದೆ ಗುಜರಾತ್ ಚುನಾವಣೆಯಲ್ಲಿ ಎಲ್ಲಾ 103 ಕ್ಷೇತ್ರಗಳಲ್ಲೂ ಸ್ಪರ್ಧಿಸಿ ಸೋತಿದ್ದ ಜನಸಂಘದ ಅಭ್ಯರ್ಥಿಗಳ ಉದಾಹರಣೆ ನೀಡಿದರು. ಈ 103 ಅಭ್ಯರ್ಥಿಗಳಲ್ಲಿ 99 ಮಂದಿ ಠೇವಣಿ ಕಳೆದುಕೊಂಡಿದ್ದರು. ಉಳಿದ ನಾಲ್ವರು ಕ್ಷೇತ್ರದ ಜನತೆಗೆ ಸಿಹಿ ಹಂಚಿದ್ದರು. ಗೆದ್ದದಕ್ಕಲ್ಲ, ಠೇವಣಿ ಉಳಿಸಿಕೊಂಡಿದ್ದಕ್ಕೆ ಎಂದು ಪ್ರಧಾನಿ ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News