ಪ್ರಮುಖ ಜಲಾಶಯಗಳಲ್ಲಿ ಜಲಮಟ್ಟ ಕುಸಿತ

Update: 2018-02-16 16:39 GMT

ಹೊಸದಿಲ್ಲಿ, ಫೆ.16: ದೇಶದ 91 ಪ್ರಮುಖ ಜಲಾಶಯಗಳಲ್ಲಿ ಜಲಮಟ್ಟ ಕಳೆದ ತಿಂಗಳಿಗಿಂತ ಶೇ.2ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಜಲಸಂಪನ್ಮೂಲ ಇಲಾಖೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.

    ಫೆ.15ಕ್ಕೆ ಅನ್ವಯಿಸುವಂತೆ ಪ್ರಮುಖ ಜಲಾಶಯಗಳಲ್ಲಿ ಒಟ್ಟು 63.597 ಬಿಲಿಯನ್ ಕ್ಯುಬಿಕ್ ಮೀಟರ್(ಬಿಸಿಎಂ) ನೀರಿನ ಸಂಗ್ರಹವಿತ್ತು. ಕಳೆದ ತಿಂಗಳು ಇದೇ ಅವಧಿಯಲ್ಲಿ ಇದ್ದ ಪ್ರಮಾಣಕ್ಕಿಂತ ಇದು ಶೇ.2ರಷ್ಟು ಕಡಿಮೆಯಾಗಿದೆ. ಅಲ್ಲದೆ ಕಳೆದ ವರ್ಷದ ಇದೇ ಅವಧಿಯಲ್ಲಿ ಇದ್ದ ಪ್ರಮಾಣದ ಶೇ.88ರಷ್ಟು ಆಗಿರುತ್ತದೆ ಎಂದು ಇಲಾಖೆ ತಿಳಿಸಿದೆ. ಪಂಜಾಬ್, ರಾಜಸ್ತಾನ, ಜಾರ್ಖಂಡ್, ಒಡಿಶಾ, ಉ.ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಡ ಮತ್ತು ತೆಲಂಗಾಣ ರಾಜ್ಯಗಳ ಜಲಾಶಯಗಳಲ್ಲಿ ಜಲಮಟ್ಟ ಕಳೆದ ವರ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ . ಆಂಧ್ರಪ್ರದೇಶದ ಜಲಾಶಯಗಳಲ್ಲಿ ಕಳೆದ ವರ್ಷ ಇದ್ದಷ್ಟೇ ಜಲಪ್ರಮಾಣವಿದೆ . ಹಿಮಾಚಲ ಪ್ರದೇಶ, ಪ.ಬಂಗಾಲ, ತ್ರಿಪುರ, ಮಹಾರಾಷ್ಟ್ರ, ಉತ್ತರಾಖಂಡ, ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಜಲಾಶಯಗಳಲ್ಲಿ ಕಳೆದ ವರ್ಷದ ಇದೇ ಅವಧಿಯಲ್ಲಿ ಇದ್ದ ಪ್ರಮಾಣಕ್ಕಿಂತ ಹೆಚ್ಚಿದೆ . ದೇಶದ 91 ಪ್ರಮುಖ ಜಲಾಶಯಗಳ ಒಟ್ಟು ಜಲಸಂಗ್ರಹಣಾ ಸಾಮರ್ಥ್ಯ 161.993 ಬಿಸಿಎಂ ಆಗಿದೆ. ಇದರಲ್ಲಿ 37 ಜಲಾಶಯಗಳು ಜಲವಿದ್ಯುತ್ ಉತ್ಪಾದಿಸುವ ವ್ಯವಸ್ಥೆಯನ್ನು ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News