ದೇಶದಲ್ಲಿ ಆ್ಯಂಟಿಬಯಾಟಿಕ್ಸ್ ಮಾತ್ರೆ ಬಳಕೆ ಪ್ರಮಾಣದಲ್ಲಿ ಹೆಚ್ಚಳ

Update: 2018-02-16 16:42 GMT

ಲಕ್ನೊ, ಫೆ.16: ಕಳೆದ 10 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಆ್ಯಂಟಿಬಯಾಟಿಕ್ಸ್ ಮಾತ್ರೆಗಳ ಸೇವನೆ ಪ್ರಮಾಣ ಶೇ.66ರಷ್ಟು ಹೆಚ್ಚಿದೆ ಎಂದು ವರದಿಯೊಂದು ತಿಳಿಸಿದೆ.

ಜಾಗತಿಕ ಮಟ್ಟದಲ್ಲಿಯೂ ಆ್ಯಂಟಿಬಯಾಟಿಕ್ಸ್ ಮಾತ್ರೆಗಳ ಸೇವನೆಯ ಪ್ರಮಾಣದಲ್ಲಿ ಶೇ.36ರಷ್ಟು ಹೆಚ್ಚಳವಾಗಿದೆ. ಆದರೆ ಭಾರತದಲ್ಲಿ ಈ ಪ್ರಮಾಣ ಶೇ.66ರಷ್ಟು ಹೆಚ್ಚಿದ್ದು , ವೈದ್ಯರ ಸೂಚನೆ ಇಲ್ಲದೆಯೂ ಜನರಿಗೆ ಆ್ಯಂಟಿಬಯಾಟಿಕ್ಸ್ ಮಾತ್ರೆಗಳು ಸುಲಭದಲ್ಲಿ ಲಭ್ಯವಾಗುತ್ತಿರುವುದು ಈ ಹೆಚ್ಚಳಕ್ಕೆ ಕಾರಣವಾಗಿರಬಹುದು ಎಂದು ಸಾರ್ವಜನಿಕ ಆರೋಗ್ಯ ಸಂಶೋಧನಾ ಸಂಸ್ಥೆಯ ರೋಗವಿಜ್ಞಾನ, ಆರ್ಥಿಕತೆ ಮತ್ತು ಕಾರ್ಯನೀತಿ ವರದಿಯಲ್ಲಿ ತಿಳಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ 69 ದೇಶಗಳಲ್ಲಿ ನಡೆಸಿದ ಅಧ್ಯಯನವನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ.

 ಪ್ರತೀ ವರ್ಷ ಭಾರತದಲ್ಲಿ ರೋಗಿಗಳು 1,300 ಕೋಟಿ ಆ್ಯಂಟಿಬಯಾಟಿಕ್ಸ್ ಮಾತ್ರೆಗಳನ್ನು ಸೇವಿಸುತ್ತಿದ್ದರೆ, ಚೀನಾದಲ್ಲಿ ಈ ಪ್ರಮಾಣ 1,000 ಕೋಟಿ, ಅಮೆರಿಕದಲ್ಲಿ 700 ಕೋಟಿ ಆಗಿರುತ್ತದೆ ಎಂದು ವರದಿ ತಿಳಿಸಿದೆ. 2013ರಲ್ಲಿ ಭಾರತದ ಸುಮಾರು 58,000 ನವಜಾತ ಶಿಶುಗಳು ಬ್ಯಾಕ್ಟೀರಿಯಾ ಸೋಂಕಿನ ಕಾರಣದಿಂದ ಮೃತಪಟ್ಟಿರುವುದಾಗಿ ಪ್ರಸಿದ್ಧ ವೈದ್ಯಕೀಯ ಪತ್ರಿಕೆ ‘ಲ್ಯಾಂಕೆಟ್’ 2014ರಲ್ಲಿ ನಡೆಸಿದ್ದ ಅಧ್ಯಯನದಿಂದ ತಿಳಿದುಬಂದಿದೆ.

         ಆ್ಯಂಟಿಬಯಾಟಿಕ್ಸ್‌ಗಳ ವಿಪರೀತ ಸೇವನೆಯಿಂದ ಬ್ಯಾಕ್ಟೀರಿಯಾಗಳಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದು ಸೂಕ್ಷ್ಮಜೀವವಿಜ್ಞಾನಿಗಳು ಎಚ್ಚರಿಸಿದ್ದಾರೆ ಎಂದು ಸಂಜಯ್‌ಗಾಂಧಿ ಸ್ನಾತಕೋತ್ತರ ವೈದ್ಯವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ ರಾಕೇಶ್ ಕಪೂರ್ ತಿಳಿಸಿದ್ದಾರೆ. ಅಲ್ಲದೆ ಆ್ಯಂಟಿಬಯಾಟಿಕ್ಸ್ ಮಾತ್ರೆಗಳನ್ನು ವಿವೇಚನಾರಹಿತವಾಗಿ ಸೇವಿಸುವುದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

           ಸೋಂಕುರೋಗದ ಪ್ರಕರಣದಲ್ಲಿ ಸುಮಾರು ಶೇ. 80ರಷ್ಟು ರೋಗಗಳು ವೈರಸ್‌ನಿಂದ ಉಂಟಾಗುತ್ತಿದ್ದು ಇದಕ್ಕೆ ಆ್ಯಂಟಿಬಯಾಟಿಕ್ಸ್ ಮಾತ್ರೆ ಸೇವಿಸುವ ಅಗತ್ಯವಿಲ್ಲ. ಶೇ.20ರಷ್ಟು ಮಾತ್ರ ಬ್ಯಾಕ್ಟೀರಿಯಾಗಳಿಂದ ಬರುತ್ತವೆ. ಬ್ಯಾಕ್ಟೀರಿಯಾಗಳು ರೂಪಾಂತರ ಪ್ರಕ್ರಿಯೆಯಲ್ಲಿ ನಿಪುಣರಾಗಿರುವ ಕಾರಣ ಇವು ಪ್ರತಿರೋಧಕ ಶಕ್ತಿಯನ್ನು ತ್ವರಿತವಾಗಿ ಗಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂದು ಕಪೂರ್ ತಿಳಿಸಿದ್ದಾರೆ.

      ಸಾಮಾನ್ಯ ಕೆಮ್ಮು ಹಾಗೂ ಚಳಿಜ್ವರಕ್ಕೂ ಆ್ಯಂಟಿಬಯಾಟಿಕ್ಸ್ ಮಾತ್ರೆ ಸೂಚಿಸಬಾರದು ಎಂದು ವರದಿಯಲ್ಲಿ ವೈದ್ಯರಿಗೆ ಸಲಹೆ ಮಾಡಲಾಗಿದೆ. ಆ್ಯಂಟಿಬಯಾಟಿಕ್ಸ್ ಮಾತ್ರೆಗಳ ವಿಪರೀತ ಸೇವನೆ ಚಯಾಪಚಯ ಪ್ರಕ್ರಿಯೆಗೆ ಘಾಸಿ ತರುತ್ತದೆ ಹಾಗೂ ಡಯಾಬಿಟಿಸ್ ಮತ್ತು ಕರುಳಿನ ಸಮಸ್ಯೆಗೆ ಕಾರಣವಾಗುತ್ತದೆ. ಆ್ಯಂಟಿಬಯಾಟಿಕ್ಸ್ ಮಾತ್ರೆ ಪ್ರತಿರೋಧಕ ಬ್ಯಾಕ್ಟೀರಿಯಾಗಳಿಂದ ವರ್ಷಂಪ್ರತಿ ವಿಶ್ವದಲ್ಲಿ ಸುಮಾರು 7 ಲಕ್ಷ ಜನ ಸಾಯುತ್ತಿರುವ ಕುರಿತು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News