ಇದು ಸ್ವಯಂಪ್ರೇರಿತ ಘಟನೆ ಎಂದ ವಿದೇಶ ವ್ಯವಹಾರ ಇಲಾಖೆ

Update: 2018-02-16 17:22 GMT

ಹೊಸದಿಲ್ಲಿ, ಫೆ.16: ಕಳೆದ ತಿಂಗಳು ಸ್ವಿಝರ್‌ಲ್ಯಾಂಡಿನಲ್ಲಿ ನಡೆದಿದ್ದ ವಿಶ್ವ ಆರ್ಥಿಕ  ಸಮಾವೇಶದಲ್ಲಿ ಪಾಲ್ಗೊಂಡಿದ್ದ ಭಾರತದ ಪ್ರಮುಖ ಉದ್ಯಮಿಗಳು ಅಲ್ಲಿ ಪ್ರಧಾನಿ ಮೋದಿಯವರ ಜೊತೆ ಕ್ಲಿಕ್ಕಿಸಿರುವ ಫೋಟೋದಲ್ಲಿ ಇದೀಗ ತಲೆತಪ್ಪಿಸಿಕೊಂಡಿರುವ ನೀರವ್ ಮೋದಿ ಇದ್ದ ಬಗ್ಗೆ ಸ್ಪಷ್ಟನೆ ನೀಡಿರುವ ವಿದೇಶ ವ್ಯವಹಾರ ಇಲಾಖೆ, ಇದು ಸ್ವಯಂಪ್ರೇರಿತ ಘಟನೆಯಾಗಿದೆ ಎಂದು ತಿಳಿಸಿದೆ.

  ನೀವು ಪ್ರಸ್ತಾವಿಸುತ್ತಿರುವ ಫೋಟೋ ಯಾವುದೇ ಪೂರ್ವಸಿದ್ಧತೆಯಿಲ್ಲದೆ ತೆಗೆದಿರುವ ಸಹಜ , ಸ್ವಯಂಪ್ರೇರಿತ ಪ್ರಕ್ರಿಯೆಯಾಗಿದೆ. ಒಂದು ಸಭೆ ಮುಗಿಸಿ ಇನ್ನೊಂದು ಸಭೆಯಲ್ಲಿ ಪಾಲ್ಗೊಳ್ಳುವಾಗ ಸಹಜವಾಗಿಯೇ ಈ ರೀತಿ ಫೋಟೋ ಕ್ಲಿಕ್ಕಿಸಲಾಗುತ್ತದೆ ಎಂದು ವಿದೇಶ ವ್ಯವಹಾರ ಇಲಾಖೆಯ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ. ಸಾಪ್ತಾಹಿಕ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.

 ನೀರವ್ ಮೋದಿ ವಿದೇಶ ವ್ಯವಹಾರ ಕಚೇರಿಯನ್ನು ಸಂಪರ್ಕಿಸಿಲ್ಲ ಹಾಗೂ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ರವೀಶ್ ಕುಮಾರ್ ತಿಳಿಸಿದರು.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿ ನೀರವ್ ಮೋದಿ ದಾವೋಸ್‌ನಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫೋಟೋವನ್ನು ಗುರುವಾರ ಕಾಂಗ್ರೆಸ್ ಬಿಡುಗಡೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News