ಮೋದಿ ಸರಕಾರದ ‘ಉಡಾನ್’ ಯೋಜನೆಯೆಂದರೆ ಇಲ್ಲಿ ಮೋಸ ಮಾಡಿ ವಿದೇಶಕ್ಕೆ ಓಡಿ ಹೋಗುವುದು

Update: 2018-02-16 17:33 GMT

ಹೊಸದಿಲ್ಲಿ, ಫೆ.16: ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ನಡೆದಿರುವ 11,000 ಕೋಟಿ ರೂ. ಮೊತ್ತದ ವಂಚನೆ ಪ್ರಕರಣ ಬೃಹತ್ ಬ್ಯಾಂಕ್ ಲೂಟಿ ಹಗರಣವಾಗಿದೆ . ಈ ಹಗರಣದ ಬೇರು ಇನ್ನಷ್ಟು ಆಳದಲ್ಲಿದ್ದು ಸುಮಾರು 21,306 ಕೋಟಿ ರೂ. ವಂಚಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಇದು ಯುಪಿಎ ಸರಕಾರದ ಅವಧಿಯಲ್ಲಿ ನಡೆದಿದ್ದ ಮತ್ತೊಂದು ಹಗರಣವಾಗಿದ್ದು, ಎನ್‌ಡಿಎ ಸರಕಾರ ಕೈಗೊಂಡ ಎಚ್ಚರಿಕೆಯ ಕ್ರಮದಿಂದ ಬೆಳಕಿಗೆ ಬಂದಿದೆ ಎಂದು ತಿಳಿಸಿದೆ.

ಸರಕಾರ ಈ ಹಗರಣದ ಬಗ್ಗೆ ಮೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ, ಪ್ರಕರಣದ ಪ್ರಮುಖ ಆರೋಪಿ, ಬಿಲಿಯಾಧೀಶ್ವರನಾಗಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ, ಆತನ ಸಂಬಂಧಿ ಮೆಹುಲ್ ಚೋಕ್ಸಿ ಹಾಗೂ ಇತರರು ಭಾರತ ಬಿಟ್ಟು ತೆರಳಲು ಸರಕಾರ ಹೇಗೆ ಅವಕಾಶ ಮಾಡಿಕೊಟ್ಟಿತು ಎಂದು ಪ್ರಶ್ನಿಸಿದ್ದಾರೆ. 203 ಮುಚ್ಚಳಿಕೆ ಪತ್ರಗಳಲ್ಲಿ 11,400 ಕೋಟಿ ರೂ. ಅವ್ಯವಹಾರದ ಜೊತೆಗೆ ನಾಲ್ಕು ಸಂಸ್ಥೆಗಳಿಗೆ 30 ಬ್ಯಾಂಕ್‌ಗಳು 9,906 ಕೋಟಿ ರೂ. ಅಕ್ರಮ ಸಾಲ ನೀಡಿರುವುದಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಈಗಾಗಲೇ ಒಪ್ಪಿಕೊಂಡಿದೆ. ಆದ್ದರಿಂದ ಇಲ್ಲಿ 21,036 ಕೋಟಿ ರೂ. ಮೊತ್ತದ ವಂಚನೆ ಎಸಗಲಾಗಿದೆ ಎಂದಿದ್ದಾರೆ. ಮೋದಿ ಸರಕಾರದ ‘ಉಡಾನ್’ ಯೋಜನೆ ಎಂದರೆ ಇಲ್ಲಿ ಮೋಸಮಾಡಿ, ವಿದೇಶಕ್ಕೆ ಓಡಿ ಹೋಗಿ ಎಂಬಂತಾಗಿದೆ ಎಂದು ಅವರು ಟೀಕಿಸಿದರು.

ಈ ಆರೋಪವನ್ನು ತಳ್ಳಿಹಾಕಿರುವ ಸಚಿವ ಪ್ರಕಾಶ್ ಜಾವಡೇಕರ್, ಯುಪಿಎ ಸರಕಾರದ ಆಡಳಿತಾವಧಿಯಲ್ಲಿ ಹಾಲಾಗಿದ್ದ ಬ್ಯಾಂಕಿಂಗ್ ವ್ಯವಸ್ಥೆಗೆ ಪುನಶ್ಚೇತನ ನೀಡುವ ಕಾರ್ಯವನ್ನು ಎನ್‌ಡಿಎ ಸರಕಾರ ಮಾಡುತ್ತಿದೆ. ಹೀಗೆ ಮಾಡುವಾಗ ಪಿಎನ್‌ಬಿ ಹಗರಣ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News