ಚಳಿಗಾಲದ ಒಲಿಂಪಿಕ್ಸ್: ಭಾರತದ ಸವಾಲು ಅಂತ್ಯ

Update: 2018-02-16 19:02 GMT

ಪಿಯೊಂಗ್‌ಚಾಂಗ್, ಫೆ.16: ಇಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾರತದ ಜಗದೀಶ್ ಸಿಂಗ್ ಅವರು ಪುರುಷರ 15 ಕಿ.ಮೀ ಫ್ರೀ ಕ್ರಾಸ್ ಕಂಟ್ರಿ ಸ್ಕೀಯಿಂಗ್ ರೇಸ್‌ನಲ್ಲಿ 103ನೇ ಸ್ಥಾನ ಪಡೆಯುವುದರೊಂದಿಗೆ ಅಭಿಯಾನ ಕೊನೆಗೊಳಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದ 26ರ ಹರೆಯದ ಜಗದೀಶ್ ಸಿಂಗ್ ಅವರು 43.03 ನಿಮಿಷಗಳಲ್ಲಿ ಗುರಿ ತಲುಪಿದರು. ಒಟ್ಟು 119 ಮಂದಿ ಸ್ಪರ್ಧಿಸಿದ್ದರು.ಇದರಲ್ಲಿ ಜಗದೀಶ್ 103ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

 ಜಗದೀಶ್ ಅವರಿಗಿಂತ 9:16.4 ನಿಮಿಷಗಳಲ್ಲಿ ಗುರಿ ಮುಟ್ಟಿದ ಸಿಟ್ಸರ್‌ಲೆಂಡ್‌ನ ಡರಿಯೊ ಕೊಲೊಗ್ನಾ ಅವರು (34:43.9) ಮೂರನೇ ಬಾರಿ ಒಲಿಂಪಿಕ್ಸ್ ಚಿನ್ನ ಗೆದ್ದುಕೊಂಡರು. ನಾರ್ವೆಯ ಸಿಮೆನ್ ಕ್ರುಯ್ಗೆರ್ (34:02.2) ಬೆಳ್ಳಿ ಮತ್ತು ರಶ್ಯದ ಡೆನಿಸ್ ಸ್ಪ್ಟಿಸ್ಟೊವ್ (34:06.6) ಕಂಚು ಪಡೆದರು.

    ಜಗದೀಶ್ ಅವರು 1.5 ಕಿ.ಮೀ ದೂರ ತಲುಪು ವಾಗಲೇ 40 ಸೆಕೆಂಡ್‌ಗಳಷ್ಟು ಹಿಂದೆ ಇದ್ದರು. ರೇಸ್ ಮುಂದುವರಿದಂತೆ ಅಂತರ ಜಾಸ್ತಿಯಾಗಿತ್ತು. ಅರ್ಧಕ್ಕೆ ತಲುಪುವಾಗ ಡರಿಯೊ ಕೊಲೊಗ್ನಾ ಅವರಿಗಿಂತ 4:28 ನಿಮಿಷಗಳಷ್ಟು ಹಿಂದೆ ಬಿದ್ದರು. ಮಂಜು ಮುಸುಕಿರುವ ದಾರಿಯಲ್ಲಿ ಓಡುವುದು ಸ್ಪರ್ಧಾಳುಗಳಿಗೆ ಕಠಿಣ ಸವಾಲೇ ಸರಿ.ಆದರೆ ಡರಿಯೊ ಕೊಲೊಗ್ನಾ ಅವರಿಗೆ ಮೂರನೇ ಬಾರಿ ಪದಕ ಗೆಲ್ಲಲು ಸಮಸ್ಯೆಯಾಗಲಿಲ್ಲ.

    ಭಾರತದ ಪರ ಇಬ್ಬರು ಮಾತ್ರ ಚಳಿಗಾಲದ ಒಲಿಂಪಿಕ್ಸ್‌ಗೆ ತೆರಳಿದ್ದರು. ಅವರೆಂದರೆ ಜಗದೀಶ್ ಸಿಂಗ್ ಮತ್ತು ಶಿವ ಕೇಶವನ್. ಫೆ.11ರಂದು ನಡೆದ ಪುರುಷರ ಸಿಂಗಲ್ಸ್ ಲೂಜ್ ಸ್ಪರ್ಧೆಯಲ್ಲಿ ಕೇಶವನ್ 34ನೇ ಸ್ಥಾನ ಪಡೆದಿದ್ದರು. ಇದು ಅವರ ಆರನೇ ಹಾಗೂ ಕೊನೆಯ ಒಲಿಂಪಿಕ್ಸ್ ಆಗಿತ್ತು.

   ಚಳಿಗಾಲದ ಒಲಿಂಪಿಕ್ಸ್‌ಗಳಲ್ಲಿ ಭಾರತದ ಪ್ರದರ್ಶನ ಹಿಂದಿನಿಂದಲೂ ಚೆನ್ನಾಗಿಲ್ಲ. ಶಿವ ಕೇಶವನ್ 6 ಬಾರಿ ಸ್ಪರ್ಧಿಸಿದ್ದರೂ ಪದಕ ಗೆಲ್ಲಲಿಲ್ಲ. ಅವರು 6 ಬಾರಿ ಒಲಿಂಪಿಕ್ಸ್ ಕ್ರೀಡಾಪಟುಗಳ ಪಥಸಂಚಲನದಲ್ಲಿ ಭಾರತದ ಧ್ವಜಧಾರಿಯಾದ್ದರು.1998ರಿಂದ ಅವರು ಸ್ಪರ್ಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News