×
Ad

ಕಿಕ್2 ಗೆ ಆ್ಯಮಿ ಜಾಕ್ಸನ್ ನಾಯಕಿ

Update: 2018-02-17 17:21 IST

ಬಾಲಿವುಡ್‌ನ ಬಾಕ್ಸ್‌ಆಫೀಸ್ ‘ಸುಲ್ತಾನ್’ ಸಲ್ಮಾನ್ ಖಾನ್ ಅಭಿನಯದ ‘ಕಿಕ್ 2’ನ ಶೂಟಿಂಗ್ ಭರದಿಂದ ಸಾಗುತ್ತಿರುವ ನಡುವೆಯೇ ಈ ಅದ್ದೂರಿ ಚಿತ್ರದ ನಾಯಕಿ ಯಾರೆಂಬ ಬಗ್ಗೆ ಎದ್ದಿರುವ ಊಹಾಪೋಹಗಳಿಗೂ ತೆರೆಬಿದ್ದಿದೆ. ಶೀಘ್ರದಲ್ಲೇ ತೆರೆಕಾಣಲಿರುವ ರಜನಿ ಅಭಿನಯದ ‘ಯಂದಿರನ್ 2.0’ ಚಿತ್ರದ ನಾಯಕಿ ಆ್ಯಮಿ ಜಾಕ್ಸನ್, ‘ಕಿಕ್ 2’ಗೆ ನಾಯಕಿಯೆಂಬುದು ಈಗ ಕನ್‌ಫರ್ಮ್ ಆಗಿದೆ.

  ಇದಕ್ಕೂ ಮುನ್ನ ಕಿಕ್ ಚಿತ್ರದಲ್ಲಿ ನಟಿಸಿದ್ದ ಜಾಕ್ವೆಲಿನ್ ಫೆರ್ನಾಂಡಿಸ್, ‘ಕಿಕ್ 2’ನಲ್ಲೂ ನಾಯಕಿಯಾಗಿ ಮುಂದುವರಿಯಲಿದ್ದಾಳೆಂಬ ವದಂತಿಗಳೂ ಹರಿದಾಡಿದ್ದವು. ಆದರೆ ‘ಕಿಕ್ 2’ರ ನಾಯಕಿ ಪಾತ್ರಕ್ಕೆ ಆ್ಯಮಿ ಚೆನ್ನಾಗಿ ಒಪ್ಪುತ್ತಾರಾದ್ದರಿಂದ ಅಂತಿಮವಾಗಿ ಆಕೆಯನ್ನೇ ಆಯ್ಕೆ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಸಲ್ಮಾನ್ ಖಾನ್ ಅಭಿನಯದ ಚಿತ್ರದಲ್ಲಿ ಆ್ಯಮಿ ನಟಿಸುತ್ತಿರುವುದು ಇದು ಮೊದಲ ಸಲ. ಆದರೆ ಈ ಹಿಂದೆ ಸಲ್ಮಾನ್ ಸೋದರರ ಚಿತ್ರವಾದ ‘ಫ್ರೀಕಿ ಅಲಿ’ಯಲ್ಲಿ ಆಕೆ ನಟಿಸಿದ್ದಳು. ಫ್ರೀಕಿ ಅಲಿಯನ್ನು ಸೊಹೈಲ್‌ಖಾನ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದರೆ, ಆರ್ಬಾಝ್ ಖಾನ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

   ಅಂದಹಾಗೆ ‘ಕಿಕ್ 2’ ಚಿತ್ರವನ್ನು ಗ್ರಾಂಡ್‌ಸನ್ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿಸಾಜೀದ್ ನಾಡಿಯಾದ್‌ವಾಲಾ ನಿರ್ಮಿಸುತ್ತಿದ್ದಾರೆ. 2009ರಲ್ಲಿ ಬಿಡುಗಡೆಯಾದ ತೆಲುಗು ಚಿತ್ರ ಕಿಕ್‌ನ ರಿಮೇಕ್ ಇದಾಗಿತ್ತು. ಸಲ್ಮಾನ್‌ಖಾನ್, ಜಾಕ್ವೆಲಿನ್ ಫೆರ್ನಾಂಡಿಸ್ ಜೊತೆಗೆ ರಣದೀಪ್ ಹೂಡಾ ಮುಖ್ಯಪಾತ್ರದಲ್ಲಿ ನಟಿಸಿದ್ದರೆ, ನವಾಝುದ್ದೀನ್ ಸಿದ್ದೀಕಿ ಖಳನಾಯಕನಾಗಿ ಮಿಂಚಿದ್ದರು. ಇದೀಗ ‘ಕಿಕ್ 2’ನಲ್ಲಿಯೂ ರಣದೀಪ್ ಹೂಡಾ ಹಾಗೂ ನವಾಝುದ್ದೀನ್‌ಸಿದ್ದೀಕಿ ನಟಿಸಲಿದ್ದಾರೆಯೇ ಎಂಬ ವಿಷಯವನ್ನು ಮಾತ್ರ ನಿರ್ದೇಶಕರೂ ಆದ ನಾಡಿಯಾದ್ ವಾಲಾ ಇನ್ನೂ ಗುಟ್ಟಾಗಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News