ಅಯೋಗ್ಯನಿಗಾಗಿ ಸತೀಶ್ ಬಾಡಿ ಬಿಲ್ಡಿಂಗ್

Update: 2018-02-17 12:05 GMT

ನೀನಾಸಂ ಸತೀಶ್ ತನ್ನ ಮುಂದಿನ ಚಿತ್ರ ‘ಅಯೋಗ್ಯ’ನಿಗಾಗಿ ತನ್ನ ದೇಹವನ್ನು ಹುರಿಗೊಳಿಸುತ್ತಿದ್ದಾರೆ. ದಿನಕ್ಕೆ ಹಲವು ತಾಸುಗಳ ಕಾಲ ವ್ಯಾಯಾಮ ನಡೆಸಿ, ಅವರು ತನ್ನ ದೇಹದಾರ್ಢ್ಯವನ್ನು ಬೆಳೆಸಿಕೊಳ್ಳಲು ಇನ್ನಿಲ್ಲದ ಶ್ರಮ ಪಡುತ್ತಿದ್ದಾರೆ. ಅಯೋಗ್ಯದ ಮೂಲಕ ಈವರೆಗಿನ ತನ್ನ ಕಾಮನ್‌ಮ್ಯಾನ್ ಇಮೇಜ್‌ನಿಂದ ಹೊರಬರಲಿದ್ದಾರೆ. ಚಿತ್ರದಲ್ಲಿ ರವಿಶಂಕರ್ ಜೊತೆ ರೋಚಕ ಫೈಟಿಂಗ್ ದೃಶ್ಯವೊಂದರ ಚಿತ್ರೀಕರಣಕ್ಕಾಗಿ ಅವರು ತನ್ನ ದೇಹವನ್ನು ಇಷ್ಟೆಲ್ಲಾ ದಂಡಿಸಿಕೊಂಡಿದ್ದಾರಂತೆ.

 ಅಯೋಗ್ಯ ಚಿತ್ರದ ಆ್ಯಕ್ಷನ್ ದೃಶ್ಯಗಳು, ಅತ್ಯಂತ ವಿಭಿನ್ನವಾಗಿ ಮೂಡಿಬರಲು ಪ್ರಯತ್ನಿಸಿದ್ದೇನೆ. ಹೀಗಾಗಿ ನಾನು ಫಿಟ್‌ನೆಸ್ ಬಗ್ಗೆ ಗಮನಕೊಟ್ಟಿದ್ದೇನೆ ಹಾಗೂ ದೇಹವನ್ನು ಸಜ್ಜುಗೊಳಿಸಿದ್ದೇನೆ ಎಂದು ಸತೀಶ್ ಹೇಳುತ್ತಾರೆ. ಮ್ಯಾಕೊಮ್ಯಾನ್ ಲುಕ್‌ನಲ್ಲಿ ಕಾಣಿಸಿಕೊಳ್ಳಬೇಕೆಂಬ ಕನಸು ಬಹಳವರ್ಷಗಳಿಂದ ತನ್ನನ್ನು ಕಾಡುತ್ತಿತ್ತು. ಆಯೋಗ್ಯ ಚಿತ್ರದ ಪಾತ್ರದ ಮೂಲಕ ಆ ಕನಸು ನನಸಾಗಿದೆಯೆಂದವರು ತೃಪ್ತಿ ವ್ಯಕ್ತಪಡಿಸಿದ್ದಾರೆ. ದೇಹದಾರ್ಢ್ಯತೆಯನ್ನು ಪಡೆಯುವ ತನ್ನ ಪ್ರಯತ್ನಕ್ಕೆ ಬಾಲಿವುಡ್ ತಾರೆಯರು ಹಾಗೂ ಕನ್ನಡದ ಜನಪ್ರಿಯ ನಟರಾದ ವಿಜಯ್ ಹಾಗೂ ಧ್ರುವಸರ್ಜಾ ತನಗೆ ಸ್ಫೂರ್ತಿಯಾಗಿದ್ದಾರೆಂದು ಸತೀಶ್ ಹೇಳಿಕೊಂಡಿದ್ದಾರೆ.

ದೇಹದಾರ್ಢ್ಯತೆಯು ನನ್ನಲ್ಲಿ ಆತ್ಮವಿಶ್ವಾಸ ಮೂಡಲು ನೆರವಾಗಿದೆ ಹಾಗೂ ಈಗ ನಾನು ಇನ್ನಷ್ಟು ಎಳೆಯ ವಯಸ್ಸಿನವನಂತೆ ಕಾಣುತ್ತಿದ್ದೇನೆ ಎಂದೂ ಸತೀಶ್ ಹೇಳಿದ್ದಾರೆ. ಮಾರ್ಚ್ ತಿಂಗಳಲ್ಲಿ ಅಯೋಗ್ಯ ಚಿತ್ರದ ಪ್ರಮುಖ ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ರಚಿತಾರಾಮ್ ನಾಯಕಿಯಾಗಿರುವ ಈ ಚಿತ್ರವು ಮಹೇಶ್ ಎಂಬವರನ್ನು ಚಿತ್ರರಂಗಕ್ಕೆ ಹೊಸದಾಗಿ ಪರಿಚಯಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News