ಕಳ್ಳರು ಪರಾರಿಯಾಗುತ್ತಿದ್ದರೆ ಪ್ರಧಾನಿ ಪಕೋಡಾ ಬಗ್ಗೆ ಸಲಹೆ ನೀಡುತ್ತಿದ್ದಾರೆ: ಕಾಂಗ್ರೆಸ್ ಟೀಕೆ

Update: 2018-02-17 14:45 GMT

ಹೊಸದಿಲ್ಲಿ,ಫೆ.17: ಕಳ್ಳರು ದೇಶವನ್ನು ಲೂಟಿಗೈದು ಪರಾರಿಯಾಗುತ್ತಿದ್ದಾರೆ. ಆದರೆ ಆ ಬಗ್ಗೆ ಗಮನ ಹರಿಸದ ಪ್ರಧಾನಿ ನರೇಂದ್ರ ಮೋದಿ ಅವರು ಪಕೋಡಾ ಮಾರುವ ಬಗ್ಗೆ ಸಲಹೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.

ಪಂಜಾಬ್ ಆ್ಯಂಡ್ ನ್ಯಾಷನಲ್(ಪಿಎನ್‌ಬಿ) ಬ್ಯಾಂಕಿಗೆ ಕೋಟ್ಯಂತರ ರೂ. ಪಂಗನಾಮ ಹಾಕಿರುವ ಶತಕೋಟ್ಯಾಧೀಶ ನೀರವ್ ಮೋದಿಯನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು, ಹಗರಣಕೋರರು ಲೂಟಿಗೈದು ದೇಶದಿಂದ ಪರಾರಿಯಾಗುತ್ತಿರುವಾಗ ಸರಕಾರವು ಉದ್ದೇಶಪೂರ್ವಕವಾಗಿ ಗಾಢನಿದ್ರೆಯಲ್ಲಿರುವಂತಿದೆ ಎಂದು ಆರೋಪಿಸಿದರು.

ಮೋದಿ ಇತ್ತೀಚಿಗೆ ಟಿವಿ ಸಂದರ್ಶನವೊಂದರಲ್ಲಿ ಪಕೋಡಾ ಮಾರಾಟವೂ ಒಂದು ಉದ್ಯೋಗವಾಗಿದೆ ಎಂದು ಹೇಳಿದ್ದು, ಉದ್ಯೋಗ ಸೃಷ್ಟಿಯಲ್ಲಿ ಸರಕಾರದ ವೈಫಲ್ಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಇದನ್ನು ಪ್ರಮುಖ ಟೀಕಾಸ್ತ್ರವಾಗಿ ಬಳಸುತ್ತಿದೆ.

ಪಿಎನ್‌ಬಿ ವಂಚನೆ ಬೆಳಕಿಗೆ ಬಂದ ನಂತರ ದಾವೋಸ್‌ನಲ್ಲಿ ನೀರವ್ ಪ್ರಧಾನಿ ಮೋದಿಯವರೊಂದಿಗಿದ್ದ ಚಿತ್ರವೊಂದು ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ ಸಿಬಲ್ ಅವರು, ತನ್ನ ಅಧಿಕೃತ ಪ್ರವಾಸಗಳಲ್ಲಿ ತನ್ನೊಂದಿಗೆ ಯಾರೆಲ್ಲ ಪ್ರಯಾಣಿಸುತ್ತಾರೆ ಎನ್ನುವುದನ್ನು ಬಹಿರಂಗಗೊಳಿಸಲು ಮೋದಿಯವರೇಕೆ ನಿರಾಕರಿಸುತ್ತಿದ್ದಾರೆ?, ಇದು ಅವರು ಪ್ರಸ್ತಾಪಿಸುತ್ತಿರುವ ‘ಸುಗಮ ಉದ್ಯಮ ನಿರ್ವಹಣೆ’ಯ ಮಾದರಿಯೇ ಎಂದು ಪ್ರಶ್ನಿಸಿದರು.

ಬಿಜೆಪಿ ನೇತೃತ್ವದ ಸರಕಾರವು ಈ ವಿಷಯದಲ್ಲಿ ವ್ಯರ್ಥ ಮಾತುಗಳನ್ನು ನಿಲ್ಲಿಸಬೇಕು ಮತ್ತು ವಂಚನೆಯಲ್ಲಿ ತನ್ನ ಕೈವಾಡವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಬೇಕು. ನೀರವ್ ಮೋದಿ ಮತ್ತು ಮೆಹುಲ್ ಚೋಸ್ಕಿ ಸರಕಾರದ ಮೂಗಿನ ಕೆಳಗೇ ದೇಶವನ್ನು ವಂಚಿಸಿದ್ದಾರೆ, ಆದರೂ ಪ್ರಧಾನಿಯವರ ಬಳಿ ಅದಕ್ಕೆ ಉತ್ತರಗಳಿಲ್ಲ ಎಂದು ಸಿಬಲ್ ಕುಟುಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News