×
Ad

ನೀರವ್ ಮೋದಿ ಪ್ರತಿನಿಧಿಗಳ ಭೇಟಿಯಾದ ಪಿಎನ್‌ಬಿ ಅಧಿಕಾರಿ

Update: 2018-02-18 22:26 IST

ಮುಂಬೈ, ಫೆ. 18: ಬಾಕಿ ಉಳಿದಿರುವ ಮೊತ್ತ ಪಾವತಿಸುವಂತೆ ಸೂಚಿಸಲು ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಅಧಿಕಾರಿಗಳು ನೀರವ್ ಮೋದಿ ಹಾಗೂ ಗೀತಾಂಜಲಿ ಗುಂಪಿನ ಪ್ರತಿನಿಧಿಗಳನ್ನು ಭೇಟಿಯಾಗಿದ್ದಾರೆ ಎಂದು ಬ್ಯಾಂಕ್ ಅಧಿಕಾರಿಗಳು ಶೇರು ವಿನಿಮಯ ಕೇಂದ್ರಕ್ಕೆ ಸ್ಪಷ್ಟನೆ ನೀಡಿದ್ದಾರೆ. ‘‘ಮೊತ್ತ ಮರು ಪಾವತಿಸುವಂತೆ ಸೂಚಿಸಲು ದಿಲ್ಲಿ ಹಾಗೂ ಮುಂಬೈಯಲ್ಲಿ ನೀರವ್ ಮೋದಿ ಗುಂಪು ಹಾಗೂ ಗೀತಾಂಜಲಿ ಗುಂಪಿನ ಪ್ರತಿನಿಧಿಗಳೊಂದಿಗೆ ಸರಣಿ ಸಭೆ ನಡೆಸಲಾಗಿದೆ. ಆಮದು ಕಾನೂನುಬದ್ಧ ಎಂಬುದಕ್ಕೆ ಅಗತ್ಯವಿರುವ ದಾಖಲೆಗಳನ್ನು ಒದಗಿಸುವಂತೆ ಅವರು ನಿರ್ದೇಶಿಸಿದ್ದಾರೆ’’ ಎಂದು ಶೇರು ವಿನಿಮಯ ಕೇಂದ್ರ ಶನಿವಾರ ಸ್ವೀಕರಿಸಿದ ಪಿಎನ್‌ಪಿ ಹೇಳಿಕೆ ತಿಳಿಸಿದೆ. ಬ್ಯಾಂಕ್‌ನಲ್ಲಿ ನಡೆದಿರುವ ವಂಚನೆಯ ವಿವರ ನೀಡಿರುವ ಬ್ಯಾಂಕ್, ‘‘2018 ಜನವರಿ 16ರಂದು ನೀರವ್ ಮೋದಿ ಗುಂಪಿನ ಪಾಲುದಾರ ಸಂಸ್ಥೆ ಮುಂಬೈ ಬ್ರಾಡಿ ಹೌಸ್‌ನಲ್ಲಿ ಬ್ರಾಂಚ್ ಅನ್ನು ಸಂಪರ್ಕಿಸಿತ್ತು. ಸಾಗರೋತ್ತರ ಪೂರೈಕೆದಾರರಿಗೆ ಪಾವತಿ ಮಾಡಲು ಖರೀದಿದಾರರ ಸಾಲಕ್ಕೆ ಅವಕಾಶ ನೀಡುವ ಮನವಿಯೊಂದಿಗೆ ಪ್ರಮುಖ ದಾಖಲೆಗಳನ್ನು ಸಲ್ಲಿಸಿತ್ತು’’ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಮೇಲಿನ ಸಂಸ್ಥೆಯ ಹೆಸರಿನಲ್ಲಿ ಮಂಜೂರಿ ಮಿತಿಗೆ ಅವಕಾಶ ಇಲ್ಲದೆ ಇರುವುದರಿಂದ ಖರೀದಿದಾರರ ಸಾಲ ಹೆಚ್ಚಿಸುವ ಎಲ್‌ಒಯು (ಲೆಟರ್ ಆಫ್ ಅಂಡರ್‌ಟೇಕಿಂಗ್) ನೀಡಲು ಕನಿಷ್ಠ ಶೇ. 100 ನಗದು ಮಿತಿ ಸಲ್ಲಿಸುವಂತೆ ಬ್ಯಾಂಚ್‌ನ ಅಧಿಕಾರಿಗಳು ಸಂಸ್ಥೆಗೆ ಸೂಚಿಸಿದ್ದರು. ಆದರೆ, ಕಳೆದ ಕೆಲವು ವರ್ಷಗಳಿಂದ ನಾವು ಇಂತಹ ವರ್ಗಾವಣೆಗಳನ್ನು ಮಾಡುತ್ತಿದ್ದೇವೆ ಎಂದು ಸಂಸ್ಥೆ ಪ್ರತಿಪಾದಿಸಿತ್ತು ಎಂದು ಹೇಳಿಕೆ ತಿಳಿಸಿದೆ. ಫೆಬ್ರವರಿ 14ರಂದು ಪಂಜಾಬ್ ನ್ಯಾಶನಲ್ ಬ್ಯಾಂಕ್, ತನ್ನ ಮುಂಬೈ ಶಾಖೆಯಲ್ಲಿ 1.8 ಶತಕೋಟಿ ಡಾಲರ್ ವಂಚನೆ ನಡೆದಿದೆ ಎಂದು ಶೇರು ವಿನಿಮಯ ಕೇಂದ್ರಕ್ಕೆ ಮಾಹಿತಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News