ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಸೋಲು

Update: 2018-02-18 18:46 GMT

ಜೋಹಾನ್ಸ್‌ಬರ್ಗ್, ಫೆ.18: ಕಳಪೆ ಫೀಲ್ಡಿಂಗ್‌ಗೆ ಬೆಲೆ ತೆತ್ತ ಭಾರತದ ಮಹಿಳಾ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕ ವಿರುದ್ಧ ರವಿವಾರ ಇಲ್ಲಿ ನಡೆದ 3ನೇ ಟ್ವೆಂಟಿ-20 ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಸೋತಿದೆ.

ಐದು ಪಂದ್ಯಗಳ ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಭಾರತ 2-0 ಮುನ್ನಡೆಯಲ್ಲಿತ್ತು. ಇದೀಗ ತಿರುಗೇಟು ನೀಡಿರುವ ದಕ್ಷಿಣ ಆಫ್ರಿಕ ಸರಣಿಯಲ್ಲಿ ಸ್ಪರ್ಧೆ ಕಾಯ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತವನ್ನು ಕೇವಲ 133 ರನ್‌ಗೆ ನಿಯಂತ್ರಿಸಿದ ದಕ್ಷಿಣ ಆಫ್ರಿಕ 19ನೇ ಓವರ್‌ನಲ್ಲಿ ಗುರಿ ತಲುಪಿತು. ಐದು ವಿಕೆಟ್ ಗೊಂಚಲು ಕಬಳಿ ಭಾರತದ ಆಟಗಾರ್ತಿಯರನ್ನು ಕಾಡಿದ ಮಧ್ಯಮ ವೇಗಿ ಶಬ್ನಿಮ್ ಇಸ್ಮಾಯೀಲ್(5-30) ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ದಕ್ಷಿಣ ಆಫ್ರಿಕದ ಬ್ಯಾಟಿಂಗ್‌ನಲ್ಲಿ ಸನ್ ಲುಸ್(41), ಟ್ರಯೊನ್ಸ್(34), ನಾಯಕಿ ಡೇನ್ ವ್ಯಾನ್ ನೀಕೆರ್ಕ್(26) ಹಾಗೂ ಮಿಗ್ನನ್ ಡು ಪ್ರೀಝ್(20) ಎರಡಂಕೆಯ ಸ್ಕೋರ್ ದಾಖಲಿಸಿದರು.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ 17.5 ಓವರ್‌ಗಳಲ್ಲಿ 133 ರನ್‌ಗೆ ಆಲೌಟಾಯಿತು. ಮಿಥಾಲಿ ರಾಜ್ ಬೇಗನೆ ಔಟಾದಾಗ ಸ್ಮತಿ ಮಂಧಾನ ಹಾಗೂ ಹರ್ಮನ್‌ಪ್ರೀತ್ ಕೌರ್ 55 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಕೌರ್ ಅವರು ಮಂಧಾನ ಔಟಾದ ಬಳಿಕ ವೇದಾ ಕೃಷ್ಣಮೂರ್ತಿ ಅವರೊಂದಿಗೆ 38 ರನ್ ಸೇರಿಸಿದರು. ಆದರೆ, ಭಾರತ ಕೇವಲ 40 ರನ್ ಗಳಿಸುವಷ್ಟರಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡಿತು.

ಸಂಕ್ಷಿಪ್ತ ಸ್ಕೋರ್

►ಭಾರತ: 17.5 ಓವರ್‌ಗಳಲ್ಲಿ 133

(ಮಂಧಾನ 37, ಹರ್ಮನ್‌ಪ್ರೀತ್ ಕೌರ್ 48, ಇಸ್ಮಾಯೀಲ್ 5-30)

►ದಕ್ಷಿಣ ಆಫ್ರಿಕ: 19 ಓವರ್‌ಗಳಲ್ಲಿ 134/5

(ಲುಸ್ 41, ಟೈರೊನ್ 34, ವಸ್ತ್ರಕರ್ 2-21)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News