ತಾಜ್ ಭೇಟಿ: ಬಾಲ್ಯದ ನೆನಪಿನ ಬುತ್ತಿ ತೆರೆದಿಟ್ಟ ಕೆನಡಾ ಪ್ರಧಾನಿ

Update: 2018-02-19 04:19 GMT

ಆಗ್ರಾ, ಫೆ.19: ವಿಶ್ವವಿಖ್ಯಾತ ತಾಜ್‌ಮಹಲ್‌ಗೆ ರವಿವಾರ ಭೇಟಿ ನೀಡಿದ ಕೆನಡಾ ಪ್ರಧಾನಿ ಜಸ್ಟಿನ್ ತ್ರೂಡೊ, 35 ವರ್ಷಗಳ ಹಿಂದೆ ತಂದೆ ಹಾಗೂ ಅಂದಿನ ಕೆನಡಾ ಪ್ರಧಾನಿ ಪೀರ್ ತ್ರೂಡೊ ಜತೆಗೆ ಭಾರತಕ್ಕೆ ಭೇಟಿ ನೀಡಿದ್ದ ನೆನಪಿನ ಬುತ್ತಿ ತೆರೆದಿಟ್ಟರು.

"ಸುಮಾರು 35 ವರ್ಷಗಳ ಹಿಂದೆ ನನಗೆ 11 ವರ್ಷವಾಗಿದ್ದಾಗ ನಾನು ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದ ತಂದೆಯ ಜತೆ ಬಂದಿದ್ದೆ. ತಾಜ್‌ಮಹಲ್ ನೋಡಲು ದಿಲ್ಲಿಯಿಂದ ಆಗ್ರಾಕ್ಕೆ ಬಂದಿದ್ದೆವು" ಎಂದು ತ್ರೂಡೊ ನೆನಪಿಸಿಕೊಂಡು ಅಂತರಾಳಕ್ಕೆ ಇಳಿದರು. ಆದರೆ ತಂದೆ ಬಿಡುವಿಲ್ಲದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಾಜ್‌ಗೆ ಬಂದಿರಲಿಲ್ಲ ಎಂದು ನೆನಪಿಸಿಕೊಂಡರು.

"ನನಗೆ ಈಗ ಅಧಿಕೃತ ಭೇಟಿಯಲ್ಲಿ ನಮ್ಮ ಮಕ್ಕಳೊಂದಿಗೆ ತಾಜ್ ವೀಕ್ಷಿಸುವ ಅವಕಾಶ ಲಭಿಸಿದೆ. ನಿಜವಾಗಿಯೂ ಮಕ್ಕಳ ಜೊತೆ ಆಹ್ಲಾದಕರ ವಾತಾವರಣದಲ್ಲಿ ವಿಹರಿಸುವ ವಿಶೇಷ ಅವಕಾಶ ಸಿಕ್ಕಿದೆ. ಇದು ನಿಜಕ್ಕೂ ಅದ್ಭುತ ಅನುಭವ" ಎಂದು ತ್ರೂಡೊ ಭಾವುಕರಾಗಿ ನುಡಿದರು. ಪೀರ್ ತ್ರೂಡೊ 1968ರಿಂದ 1984ರವರೆಗೆ ಕೆನಡಾ ಪ್ರಧಾನಿಯಾಗಿದ್ದರು.

ಪತ್ನಿ ಸೋಫಿ ಗ್ರೆಗೊರ್ ಮಕ್ಕಳಾದ ಕ್ಸೇವಿಯರ್, ಎಲ್ಲಾಗ್ರೇಸ್ ಮತ್ತು ಹ್ಯಾಡ್ರಿಯನ್ ಜತೆಗೆ ರವಿವಾರ ಬೆಳಗ್ಗೆ 10ಕ್ಕೆ ಆಗಮಿಸಿದ ತ್ರೂಡೊ, ಮೊಘಲರ ಕಾಲದ ಈ ಸ್ಮಾರಕದಲ್ಲಿ ವಿಹರಿಸಿದರು. "ವಿಶ್ವದ ಅತ್ಯಂತ ಸುಂದರ ಮತ್ತು ಅದ್ಭುತ ಸ್ಥಳಕ್ಕೆ ಭೇಟಿ ನೀಡುವ ಅವಕಾಶ ಕಲ್ಪಿಸಿದ್ದಕ್ಕೆ ಧನ್ಯವಾದಗಳು" ಎಂದು ತ್ರೂಡೊ ಸಂದರ್ಶಕರ ಪುಸ್ತಕದಲ್ಲಿ ಅಭಿಪ್ರಾಯ ದಾಖಲಿಸಿದರು. ಪತ್ನಿ ಕೂಡಾ ತಾಜ್‌ಮಹಲ್ ಬಗ್ಗೆ ನಂಬಲಸಾಧ್ಯ ಎಂದು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News