ದಲಿತರಿಗೆ ಭೂಮಿ ಹಂಚಿಕೆ ಬೇಡಿಕೆಗೆ ಸರಕಾರದ ಒಪ್ಪಿಗೆ: ಕುಟುಂಬದಿಂದ ವಾಂಕರ್ ಶವ ಸ್ವೀಕಾರ

Update: 2018-02-19 15:08 GMT
ಭಾನುಭಾಯಿ ವಾಂಕರ್

ಗಾಂಧಿನಗರ,ಫೆ.19: ದಲಿತರಿಗೆ ಭೂಮಿ ಹಂಚಿಕೆ ಸೇರಿದಂತೆ ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳುವುದಾಗಿ ಸೋಮವಾರ ಗುಜರಾತ್ ಸರಕಾರವು ಲಿಖಿತ ಭರವಸೆ ನೀಡಿದ ಬಳಿಕ ದಲಿತ ಕಾರ್ಯಕರ್ತ ಭಾನುಭಾಯಿ ವಾಂಕರ್ ಶವವನ್ನು ಅವರ ಕುಟುಂಬ ಸದಸ್ಯರು ಸ್ವೀಕರಿಸಿದರು.

ದಲಿತ ಕುಟುಂಬವೊಂದಕ್ಕೆ ಮಂಜೂರಾಗಿರುವ ಭೂಮಿಯನ್ನು ಹಸ್ತಾಂತರಿಸುವಂತೆ ಹೋರಾಟ ನಡೆಸುತ್ತಿದ್ದ ವಾಂಕರ್(62) ಫೆ.15ರಂದು ಪಾಟಣ್ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದರು. ತೀವ್ರ ಸುಟ್ಟಗಾಯಗಳಾಗಿದ್ದ ಅವರು ಮರುದಿನ ಅಹ್ಮದಾಬಾದ್‌ನ ಖಾಸಗಿ ಆಸ್ಪತ್ರೆ ಯೊಂದರಲ್ಲಿ ಕೊನೆಯುಸಿರೆಳೆದಿದ್ದರು. ಅವರ ಸಾವು ರಾಜ್ಯದ ವಿವಿಧೆಡೆಗಳಲ್ಲಿ ಭಾರೀ ಪ್ರತಿಭಟನೆಗಳಿಗೆ ನಾಂದಿ ಹಾಡಿತ್ತು.

ವಾಂಕರ್ ಅವರ ಶವವನ್ನು ಅವರ ಹುಟ್ಟೂರಾದ ಮೆಹಸಾನಾ ಜಿಲ್ಲೆಯ ಉಂಝಾಕ್ಕೆ ಒಯ್ದು, ಸಂಜೆ ಅಂತ್ಯಸಂಸ್ಕಾರವನ್ನು ನಡೆಸಲಾಗಿದೆ ಎಂದು ದಲಿತ ಅಧಿಕಾರ ಮಂಚ್‌ನ ಸುಬೋಧ ಪರಮಾರ್ ಸುದ್ದಿಗಾರರಿಗೆ ತಿಳಿಸಿದರು.

ಗಾಂಧಿನಗರ ಜಿಲ್ಲಾಧಿಕಾರಿ ಸತೀಶ ಪಟೇಲ್ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕ ವೀರೇಂದ್ರ ಯಾದವ್ ಅವರು ಸಹಿ ಮಾಡಿರುವ ಪತ್ರದಲ್ಲಿ ‘ದಲಿತ ಸಮುದಾಯದ ಸದಸ್ಯರಿಗೆ ಈಗಾಗಲೇ ಮಂಜೂರು ಮಾಡಲಾಗಿರುವ ಭೂಮಿಯನ್ನು ಮುಂದಿನ ಆರು ತಿಂಗಳಲ್ಲಿ ಹಸ್ತಾಂತರಿಸಲಾಗುವುದು ’ಎಂದು ಭರವಸೆ ನೀಡಲಾಗಿದೆ.

ವಾಂಕರ್ ಸಾವಿಗೆ ಕಾರಣವಾದ ಘಟನೆಗಳ ಬಗ್ಗೆ ವಿಶೇಷ ತನಿಖಾ ತಂಡವೊಂದು ತನಿಖೆ ನಡೆಸಲಿದೆ ಎಂದೂ ಪತ್ರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News