ನಂಬಿಕೆಯ ವಹಿವಾಟಿಗೆ ಪಿಎನ್‌ಬಿ ಹೊಣೆ: ವಿತ್ತ ಸಚಿವಾಲಯ

Update: 2018-02-19 17:23 GMT

ಹೊಸದಿಲ್ಲಿ, ಫೆ.19: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ) ಮೂಲಕ ನಡೆದಿರುವ ನಂಬಿಕೆಯ ವಹಿವಾಟುಗಳನ್ನು ಬ್ಯಾಂಕ್ ಗೌರವಿಸುವ ಅಗತ್ಯವಿದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ.

ನೀರವ್ ಮೋದಿ ಹಾಗೂ ಇತರರು ವಿದೇಶದಲ್ಲಿರುವ ಬ್ಯಾಂಕ್ ಶಾಖೆಗಳಿಂದ ಸಾಲ ಪಡೆಯಲು  ಪಿಎನ್‌ಬಿ ಬ್ಯಾಂಕಿನ ಸಿಬ್ಬಂದಿಗಳು ಅಕ್ರಮ ಎಸಗಿದ್ದರು ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್, ಆ ಬ್ಯಾಂಕ್‌ಗಳು ಸಾಲ ನೀಡುವ ಮುನ್ನ ಸಾಲದ ಕೋರಿಕೆಯನ್ನು ಕೂಲಂಕುಷವಾಗಿ ಪರಿಶೀಲಿಸಬೇಕಿತ್ತು ಎಂದು ಹೇಳಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿತ್ತ ಇಲಾಖೆ, ಈ ವಹಿವಾಟು ಪಿಎನ್‌ಬಿ ಮೂಲಕ ನಡೆದಿರುವ ಕಾರಣ, ಇವನ್ನು ಬ್ಯಾಂಕ್ ಗೌರವಿಸಬೇಕು ಎಂದಿದೆ.

ಈ ಹಗರಣದಲ್ಲಿ ತಮಗಾಗಿರುವ ನಷ್ಟವನ್ನು ಪಿಎನ್‌ಬಿ ತುಂಬಿಸಿ ಕೊಡಬೇಕು ಎಂದು ಕೆಲವು ಬ್ಯಾಂಕ್‌ಗಳು ಹೇಳಿಕೆ ನೀಡಿವೆ.

   ಪಿಎನ್‌ಬಿ, ತನ್ನ ಮೂಲಕ ನಡೆದಿರುವ ನಂಬಿಕೆಯ ವ್ಯವಹಾರಗಳ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ವಿತ್ತ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಕುಮಾರ್ ಹೇಳಿದ್ದಾರೆ. ಅಲ್ಲದೆ ಪಿಎನ್‌ಬಿಯಲ್ಲಿ ನಡೆದಿರುವಂತಹ ಪ್ರಕರಣ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿತ್ತ ಸಚಿವಾಲಯ ಎಲ್ಲಾ ಬ್ಯಾಂಕ್‌ಗಳಿಗೂ ಪತ್ರ ಬರೆದಿದೆ. ವಂಚನೆ ಪ್ರಕರಣ ನಡೆಯದಂತೆ ಅಗತ್ಯವಿರುವ ಸೂಕ್ತ ಕ್ರಮಗಳನ್ನು ಆರ್‌ಬಿಐ ಕೂಡಾ ತೆಗೆದುಕೊಳ್ಳಲಿದೆ ಎಂದು ಕುಮಾರ್ ತಿಳಿಸಿದ್ದಾರೆ.

  ಬೆಂಕಿ ಅನಾಹುತದ ಎಚ್ಚರಿಕೆ ನೀಡುವ ಉಪಕರಣಗಳನ್ನು ಅಗತ್ಯವಿರುವ ಕಡೆಗಳಲ್ಲಿ ಸುಸ್ಥಿತಿಯಲ್ಲಿ ಇಡುವುದು ನಮ್ಮ ಕೆಲಸ. ಆದರೆ ಎಲ್ಲಾ ಬೆಂಕಿ ಅನಾಹುತಗಳನ್ನೂ ತಡೆಯಲು ಸಾಧ್ಯವಿಲ್ಲ ಎಂದವರು ಹೇಳಿದ್ದಾರೆ.

   ಈ ಮಧ್ಯೆ, ನೀರವ್ ಮೋದಿ ವಂಚನೆಯ ಪ್ರಕರಣದಲ್ಲಿ ಉಂಟಾಗಿರುವ ನಷ್ಟದ ಸಂಪೂರ್ಣ ಹೊಣೆಯನ್ನು ಪಿಎನ್‌ಬಿ ಮೇಲೆ ಹೊರಿಸಿದರೆ ಬ್ಯಾಂಕ್‌ಗೆ 8,000 ಕೋಟಿ ರೂ. ಹೆಚ್ಚುವರಿ ಬಂಡವಾಳದ ಅಗತ್ಯವಿದ್ದು, ಪ್ರಚಲಿತ ವೌಲ್ಯಮಾಪನದ ಪ್ರಕಾರ ಇದರಿಂದ ಸಂಸ್ಥೆಯ ಬಂಡವಾಳ ಪತ್ರ(ಸ್ಟಾಕ್) ಶೇ.14ರಷ್ಟು ದುರ್ಬಲಗೊಳ್ಳಲಿದೆ ಜಾಗತಿಕ ಆರ್ಥಿಕ ಸಲಹೆ ಮತ್ತು ಸೇವಾ ಸಂಸ್ಥೆ ‘ಮಾರ್ಗನ್ ಸ್ಟಾನ್ಲಿ’ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News