ಗುಜರಾತ್ ನಗರಸಭೆ ಚುನಾವಣೆ: ಗೆಲುವಲ್ಲೂ ಬಿಜೆಪಿಗೆ ಕಹಿ!

Update: 2018-02-19 16:57 GMT

ಅಹ್ಮದಾಬಾದ್,ಫೆ.19: ಗುಜರಾತ್ ನಗರಸಭಾ ಚುನಾವಣೆಗಳ ಫಲಿತಾಂಶಗಳು ಸೋಮವಾರ ಪ್ರಕಟಗೊಂಡಿದ್ದು, 75 ನಗರಸಭೆಗಳ ಪೈಕಿ 47ನ್ನು ಬಿಜೆಪಿಯು ಗೆದ್ದುಕೊಂಡಿದೆ. ಆದರೆ ಈ ಹಿಂದೆ ಹೊಂದಿದ್ದ 12 ನಗರಸಭೆಗಳನ್ನು ಅದು ಕಳೆದುಕೊಂಡಿದೆ.

ಕಾಂಗ್ರೆಸ್ ಪಕ್ಷವು 16 ನಗರಸಭೆಗಳನ್ನು ಗೆಲ್ಲುವ ಮೂಲಕ ತನ್ನ ಸಾಧನೆಯನ್ನು ಉತ್ತಮಗೊಳಿಸಿಕೊಂಡಿದೆ. 2013ರ ಚುನಾವಣೆಗಳಲ್ಲಿ ಅದು 11 ನಗರಸಭೆಗಳನ್ನು ಗೆದ್ದಿತ್ತು, ಆದರೆ ತನ್ನ ನಾಯಕರು ಬಿಜೆಪಿಗೆ ಪಕ್ಷಾಂತರಗೊಂಡ ಬಳಿಕ ಈ ಪೈಕಿ ಐದು ನಗರಸಭೆಗಳು ಅದರ ಕೈಯಿಂದ ಜಾರಿದ್ದವು.

ಇತರರು ನಾಲ್ಕು ನಗರಸಭೆಗಳನ್ನು ಗೆದ್ದುಕೊಂಡಿದ್ದರೆ, ಆರು ನಗರಸಭೆಗಳಲ್ಲಿ ಪಕ್ಷೇತರರು ಪ್ರಾಬಲ್ಯ ಸಾಧಿಸಿದ್ದಾರೆ. ಈ ನಗರಸಭೆಗಳಿಗೆ ಫೆ.17ರಂದು ಚುನಾವಣೆ ನಡೆದಿತ್ತು.

ಗುಜರಾತ್ ವಿಧಾನಸಭಾ ಚುನಾವಣೆಯ ಬಳಿಕ ನಡೆದಿರುವ ಈ ಮೊದಲ ಪ್ರಮುಖ ಚುನಾವಣೆಗಳಲ್ಲಿ ಬಿಜೆಪಿಯ ಹಿಡಿತದಲ್ಲಿದ್ದ ನಗರಸಭೆಗಳ ಸಂಖ್ಯೆ ಕ್ಷೀಣಿಸಿದ್ದರೆ ಕಾಂಗ್ರೆಸ್ ತನ್ನ ಬುಟ್ಟಿಯಲ್ಲಿದ್ದ ನಗರಸಭೆಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಗಮನಾರ್ಹ ಸಾಧನೆಯನ್ನು ಮಾಡಿದೆ. ಸೋಮವಾರದ ಫಲಿತಾಂಶವು ಹೆಚ್ಚುಕಡಿಮೆ ವಿಧಾನಸಭಾ ಚುನಾವಣೆಗಳ ಫಲಿತಾಂಶವನ್ನೇ ಹೋಲುತ್ತಿದೆ. 182 ಸದಸ್ಯಬಲದ ವಿಧಾನಸಭೆಯಲ್ಲಿ ಬಿಜೆಪಿ ಗೆಲುವನ್ನು 99 ಸ್ಥಾನಗಳಿಗೆ ಸೀಮಿತಗೊಳಿಸಿದ್ದ ಕಾಂಗ್ರೆಸ್ ತನ್ನ ಪಾಲನ್ನು ಹೆಚ್ಚಿಸಿಕೊಂಡಿತ್ತು. ವಿಧಾನಸಭಾ ಚುನಾವಣೆಯಂತೆ ಈ ಬಾರಿಯೂ ಕಾಂಗ್ರೆಸ್ ತನ್ನ ದಿಗ್ಗಜ ನಾಯಕರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿಯ ನಗರಸಭೆಗಳನ್ನು ಕಳೆದುಕೊಂಡಿದೆ. ಅಲ್ಲದೇ ಬುಡಕಟ್ಟು ಪ್ರದೇಶಗಳಲ್ಲಿಯೂ ಅದರ ಸಾಧನೆ ಉತ್ತಮವಾಗಿಲ್ಲ.

ಕಾಂಗ್ರೆಸ್ ಗೆದ್ದಿರುವ ನಗರಸಭೆಗಳ ಸಂಖ್ಯೆ ಮತ್ತು ಕೌನ್ಸಿಲರ್‌ಗಳ ಒಟ್ಟು ಸಂಖ್ಯೆಯಲ್ಲಿ ಏರಿಕೆಯಾಗಿದೆ. ವಿಧಾನಸಭಾ ಚುನಾವಣೆಗಳ ಬಳಿಕ ಪಕ್ಷವು ತನ್ನ ಸಾಧನೆಯನ್ನು ಮುಂದುವರಿಸಿದೆ ಎಂದು ಕಾಂಗ್ರೆಸ್ ನಾಯಕ ಅಲ್ಪೇಶ್ ಠಾಕೂರ್ ಹೇಳಿದರು.

ಆದರೆ, ಮತದಾರರು ಕಾಂಗ್ರೆಸ್‌ನ್ನು ತಿರಸ್ಕರಿಸಿದ್ದಾರೆ ಎನ್ನುವುದನ್ನು ಈ ಚುನಾವಣೆಯು ತೋರಿಸಿದೆ. ಬಿಜೆಪಿಯು ಆಯ್ಕೆಯಾಗದ ಸ್ಥಳಗಳಲ್ಲಿ ಮತದಾರರು ಪಕ್ಷೇತರರ ಪರ ಒಲವು ತೋರಿಸಿದ್ದಾರೆ ಎಂದು ಬಿಜೆಪಿ ನಾಯಕ ಜಿತು ವಘಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News