“ಮಹಾತ್ಮಾ ಗಾಂಧಿ ಹತ್ಯೆ ಹಿಂದಿನ ಪಿತೂರಿಗೆ ಸಾಕ್ಷಿಗಳಿವೆ”

Update: 2018-02-19 17:03 GMT

ಹೊಸದಿಲ್ಲಿ, ಫೆ.19: ಮಹಾತ್ಮ ಗಾಂಧಿ ಹತ್ಯಾ ಪ್ರಕರಣವನ್ನು ಮರುತನಿಖೆ ನಡೆಸಬೇಕೆಂದು ಕೋರಿ ಹಾಕಲಾದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ತಳ್ಳಿಹಾಕಿರುವಂತೆಯೇ, ಅಮೆರಿಕದ ಲೈಬ್ರೆರಿ ಆಫ್ ಕಾಂಗ್ರೆಸ್‌ನಿಂದ ಪಡೆದುಕೊಂಡಂತಹ ದಾಖಲೆಗಳಲ್ಲಿ ಗಾಂಧಿ ಹತ್ಯೆಯ ಹಿಂದಿರುವ ಪಿತೂರಿಗೆ ಸಾಕ್ಷಿಗಳು ಲಭ್ಯವಾಗಿವೆ ಎಂದು ಅರ್ಜಿದಾರರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ.

ಅಭಿನವ ಭಾರತ ಎಂಬ ಸಂಸ್ಥೆಯ ಪದಾಧಿಕಾರಿಯಾಗಿರುವ ಮುಂಬೈ ಮೂಲದ ಡಾ. ಪಂಕಜ್ ಫಡ್ನಿಸ್ ಈ ಅರ್ಜಿಯನ್ನು ಹಾಕಿದ್ದಾರೆ. ನ್ಯಾಯಾಧೀಶರಾದ ಎಸ್.ಎ ಬೋಬ್ಡೆ ಹಾಗೂ ಎಲ್. ನಾಗೇಶ್ವರ ರಾವ್ ಅವರನ್ನೊಳಗೊಂಡ ಪೀಠಕ್ಕೆ ಈ ಬಗ್ಗೆ ಮಾಹಿತಿ ನೀಡಿದ ಫಡ್ನಿಸ್, ಯುಎಸ್‌ನಿಂದ ಪಡೆದ ದಾಖಲೆಗಳಲ್ಲಿ ಇರುವ ಮಾಹಿತಿಯನ್ನು ಹೊರಗೆಡವುದನ್ನು ಭಾರತ ಸರಕಾರ ನಿಷೇಧಿಸಿದೆ ಎಂದು ತಿಳಿಸಿದ್ದಾರೆ. ಅಂಥ ಯಾವುದೇ ದಾಖಲೆಗಳಿದ್ದರೂ ಅದನ್ನು ಅರ್ಜಿಯ ಜೊತೆಗೆ ಪೀಠದ ಮುಂದೆ ಹಾಜರುಪಡಿಸಬೇಕು ಎಂದು ನ್ಯಾಯಪೀಠವು ಸೂಚಿಸಿದೆ.

ಯುಎಸ್ ಮೂಲದ ಅಟರ್ನಿಯೊಬ್ಬರು ಗಾಂಧಿ ಹತ್ಯೆ ಕುರಿತ ನ್ಯಾಯಸ್ಥಾಪಕ ಸಾಕ್ಷಿಯನ್ನೂ ಒದಗಿಸಬಹುದಾಗಿ ತಿಳಿಸಿದ್ದಾರೆ ಎಂದು ಫಡ್ನಿಸ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ. ಈಗಿನ ತಂತ್ರಜ್ಞಾನದ ಮೂಲಕ ನ್ಯಾಯಸ್ಥಾಪಕ ಸಾಕ್ಷಿಯನ್ನು ಒದಗಿಸುವುದು ಸಾಧ್ಯ. ಆದರೆ ಈ ಪ್ರಕರಣವನ್ನು ಮರುತನಿಖೆ ನಡೆಸುವ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ಇತಿಹಾಸದಲ್ಲಿ ನಡೆದ ಅತ್ಯಂತ ದೊಡ್ಡ ಮರೆಮಾಚುವಿಕೆ ಎಂದು ಗಾಂಧಿ ಹತ್ಯಾ ಪ್ರಕರಣವನ್ನು ಬಣ್ಣಿಸಿರುವ ಫಡ್ನಿಸ್ ಹಲವು ನೆಲೆಗಳಲ್ಲಿ ಪ್ರಕರಣದ ಮರುತನಿಖೆಯನ್ನು ನಡೆಸುವಂತೆ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News