ಆಪ್‌ಗೆ ತಟ್ಟಿದ ಕಪಾಳಮೋಕ್ಷದ ಬಿಸಿ: ಶಾಸಕನ ಬಂಧನ

Update: 2018-02-21 04:40 GMT

ಹೊಸದಿಲ್ಲಿ, ಫೆ. 21: ದೆಹಲಿಯ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲೆ ಆಮ್ ಆದ್ಮಿ ಪಕ್ಷದ ಶಾಸಕರು ಮುಖ್ಯಮಂತ್ರಿ ನಿವಾಸದಲ್ಲೇ ಕಪಾಳಮೋಕ್ಷ ನಡೆಸಿದ್ದಾರೆ ಎನ್ನಲಾದ ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾತ್ರಿ ಆಪ್ ಶಾಸಕ ಪ್ರಕಾಶ್ ಜರ್ವಾಲ್‌ನನ್ನು ಬಂಧಿಸಲಾಗಿದೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಘಟನೆ ಬಗ್ಗೆ ಕ್ಷಮೆ ಯಾಚಿಸುವವರೆಗೂ ಸಿಎಂ ಅಥವಾ ಸಚಿವ ಸಂಪುಟದ ಇತರರು ಕರೆಯುವ ಯಾವುದೇ ಸಭೆಗಳಿಗೆ ಹಾಜರಾಗುವುದಿಲ್ಲ ಎಂದು ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಮಧ್ಯೆ ಅಮಾನತುಲ್ಲಾ ಖಾನ್ ವಿರುದ್ಧವೂ ಮುಖ್ಯ ಕಾರ್ಯದರ್ಶಿ ದೂರು ನೀಡಿದ್ದಾರೆ. ಭಾರತೀಯ ಆಡಳಿತಾತ್ಮಕ ಸೇವೆ, ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ನಾಗರಿಕ ಸೇವೆ ಹಾಗೂ ದೆಹಲಿ ಸಬಾರ್ಡಿನೇಟ್ ಸರ್ವೀಸಸ್ ಸೆಲೆಕ್ಷನ್ ಬೋರ್ಡ್ ಅಧಿಕಾರಿಗಳು ಮಂಗಳವಾರ ಸಭೆ ನಡೆಸಿ ಈ ಸಂಬಂಧ ನಿರ್ಣಯ ಕೈಗೊಂಡಿದ್ದಾರೆ. ಆದರೆ ಸಾರ್ವಜನಿಕ ಸೇವೆಗೆ ಯಾವುದೇ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಸಚಿವರ ಜತೆ ಲಿಖಿತ ಸಂವಹನ ಮುಂದುವರಿಸುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಐಎಎಸ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ವಿಭಾಗಾಧಿಕಾರಿ ಮನಿಷಾ ಸಕ್ಸೇನಾ ಈ ಸಂಬಂಧ ಹೇಳಿಕೆ ನೀಡಿದ್ದಾರೆ.

ಘಟನೆಯನ್ನು ವಿರೋಧಿಸಿ ಮೂರೂ ಸಂಘಟನೆಗಳ ಅಧಿಕಾರಿಗಳು ರಾಜ್‌ಘಾಟ್ ಬಳಿ ಮಂಗಳವಾರ ರಾತ್ರಿ ಮುಂಬತ್ತಿ ಮೆರವಣಿಗೆ ನಡೆಸಿದರು. ಸೋಮವಾರ ರಾತ್ರಿ ಸಿಎಂ ನಿವಾಸದಲ್ಲಿ ಆಪ್ ಶಾಸಕರು ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಪಾದಿಸಲಾಗಿದೆ.
ಶಾಸಕರ ಈ ನಡವಳಿಕೆಯಿಂದಾಗಿ ವಿಶ್ವಾಸಕ್ಕೆ ಧಕ್ಕೆ ಬಂದಿದೆ. ಜತೆಗೆ ದೆಹಲಿ ಸರ್ಕಾರದ ರಾಜಕೀಯ ಮುಖಂಡರ ಬಗ್ಗೆ ಅಧಿಕಾರಿ ವರ್ಗ ಇರಿಸಿದ್ದ ನಂಬಿಕೆ ಕುಸಿದಿದೆ ಎಂದು ಸಂಘ ಆಪಾದಿಸಿದೆ. ಸಿಎಂ ಹಾಗೂ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಮ್ಮುಖದಲ್ಲೇ ತಮ್ಮ ಮೇಲೆ ಹಲ್ಲೆ ನಡೆದದ್ದನ್ನು ಮುಖ್ಯ ಕಾರ್ಯದರ್ಶಿ ಪ್ರಕಾಶ್ ಮಂಗಳವಾರ ಸ್ಪಷ್ಟಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News