ವಿದೇಶಗಳಿಂದ ಹಿಂದಿರುಗುವಾಗ ನೀರವ್ ಮೋದಿಯನ್ನೂ ಕರೆದುಕೊಂಡು ಬನ್ನಿ: ಪ್ರಧಾನಿಗೆ ಕುಟುಕಿದ ರಾಹುಲ್

Update: 2018-02-21 07:27 GMT

ಮೆಂಡಿಪತ್ತರ್, ಮೇಘಾಲಯ,ಫೆ.21 :  ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದೇಶ ಪ್ರಯಾಣಗಳಿಂದ ಹಿಂದಿರುಗುವ  ವೇಳೆ ಬ್ಯಾಂಕಿಂಗ್ ಹಗರಣದ ಆರೋಪಿ ನೀರವ್ ಮೋದಿಯನ್ನು ಹಿಂದಕ್ಕೆ ಕರೆದುಕೊಂಡು ಬರಬೇಕೆಂದು ಹೇಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯನ್ನು ಅಣಕವಾಡಿದ್ದಾರೆ.

"ನಮ್ಮೆಲ್ಲರ ಪರವಾಗಿ ನಾನು ಈ ಮೋದಿ (ಪ್ರಧಾನಿ)ಗೆ  ಇನ್ನೊಂದು ಮೋದಿ (ನೀರವ್) ಅವರನ್ನು ತಾವು ತಮ್ಮ ಮುಂದಿನ ವಿದೇಶ ಪಯಣದ ಸಂದರ್ಭ ಹಿಂದಕ್ಕೆ ಕರೆತರಬೇಕೆಂದು ಮನವಿ ಮಾಡುತ್ತೇನೆ. ನಾವು ಕಷ್ಟ ಪಟ್ಟು ಸಂಪಾದಿಸಿದ ಹಣ ಹಿಂದಕ್ಕೆ ಬಂದರೆ ನಾವೆಲ್ಲರೂ ಅಭಾರಿಯಾಗುತ್ತೇವೆ'' ಎಂದು  ಫೆಬ್ರವರಿ 27ರಂದು ಚುನಾವಣೆ ನಡೆಯಲಿರುವ ಮೇಘಾಲಯದಲ್ಲಿ ತಮ್ಮ ಎರಡನೇ ಹಂತದ ಪ್ರಚಾರ ಕಾರ್ಯದ ಭಾಗವಾಗಿ ಮೆಂಡಿಪತ್ತರ್ ಎಂಬಲ್ಲಿ ಮಾತನಾಡುತ್ತಾ ರಾಹುಲ್ ಹೇಳಿದರು.

"ನೀರವ್ ವಜ್ರಗಳನ್ನು ಮಾರುತ್ತಿದ್ದರು, ಇವುಗಳಿಂದ ಕನಸುಗಳನ್ನು ಸೃಷ್ಟಿಸಲಾಗುತ್ತದೆ ಎಂದವರು ಹೇಳುತ್ತಿದ್ದರು. ಅವರು ಈ ಕನಸುಗಳನ್ನು ಸರಕಾರ ಸಹಿತ ಹಲವು ಜನರಿಗೆ ಮಾರಿದ್ದಾರೆ ಹಾಗೂ ಸರಕಾರ ಸುಖವಾಗಿ ನಿದ್ದೆ ಮಾಡುತ್ತಿದ್ದಾಗ ನೀರವ್ ಮೋದಿ  ಜನರ ಹಣದೊಂದಿಗೆ ಪರಾರಿಯಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಇನ್ನೊಂದು ಮೋದಿ (ಪ್ರಧಾನಿ) ಕೂಡ ಕನಸುಗಳನ್ನು ಜನರಿಗೆ ಮಾರುತ್ತಿದ್ದರು. ಅಚ್ಛೇ ದಿನ್ ಕನಸುಗಳು ಅವಾಗಿದ್ದವು, ಎಲ್ಲರ ಬ್ಯಾಂಕು ಖಾತೆಗಳಲ್ಲಿ 15 ಲಕ್ಷ, ಎರಡು ಕೋಟಿ ಉದ್ಯೋಗ ಇತ್ಯಾದಿ ಇತ್ಯಾದಿ,'' ಎಂದು ರಾಹುಲ್ ವಿವರಿಸಿದರು.

ನರೇಂದ್ರ ಮೋದಿ ಮತ್ತವರ ಪಕ್ಷದ ದೊಡ್ಡ ಭರವಸೆಗಳಿಂದಾಗಿಯೇ ಅವರು 2014ರಲ್ಲಿ ಅಧಿಕಾರಕ್ಕೆ ಬಂದರು. ಆದರೆ ಈ ಸರಕಾರ ಆಶಾವಾದ, ಭದ್ರತೆ ಹಾಗೂ ಆರ್ಥಿಕ ಪ್ರಗತಿಗೆ ಕಾರಣವಾಗುವ ಬದಲು ನಿರಾಶಾವಾಧ, ನಿರುದ್ಯೋಗ, ಭಯ ದ್ವೇಷ ಹಾಗೂ ಹಿಂಸೆಯನ್ನು ನಮಗೆ ನೀಡಿದೆ. ``ಈ ಸರಕಾರ ಭ್ರಷ್ಟಾಚಾರ ನಿರ್ಮೂಲನಗೈಯ್ಯುವ ಬದಲು ತಾನೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂಬುದು ಮಲ್ಯ ಮತ್ತು ನೀರವ್ ಮೋದಿ ಹಗರಣಗಳಿಂದ ತಿಳಿಯುತ್ತದೆ,''ಎಂದು ರಾಹುಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News