ವಿಚಾರಣೆ ಮುಂದೂಡಿಕೆ: ಹಾದಿಯಾ ತಂದೆಯ ಮನವಿ ನಿರಾಕರಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಫೆ.21: ದೇಶಾದ್ಯಂತ ಸುದ್ದಿ ಮಾಡಿರುವ ಹಾದಿಯಾ ಪ್ರಕರಣದ ಸಂಬಂಧ ಗುರುವಾರ ನಡೆಯಲಿರುವ ವಿಚಾರಣೆಯನ್ನು ಮುಂದೂಡಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ.
ಫೆಬ್ರವರಿ 22ರಂದು ನಡೆಯಲಿರುವ ವಿಚಾರಣೆಯ ದಿನಾಂಕವನ್ನು ಮುಂದೂಡಲು ಹಾದಿಯಾರ ತಂದೆ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ ನ್ಯಾಯಾಲಯ ಈ ಮನವಿಯನ್ನು ತಳ್ಳಿಹಾಕಿದೆ.
ಶ್ರೇಷ್ಠ ನ್ಯಾಯಾಲಯದ ಮುಂದೆ ಹಾಜರಾಗುವುದಕ್ಕೂ ಮುನ್ನ ತನ್ನ ಪತ್ನಿಯನ್ನು ಹಿಂದೂ ಧರ್ಮಕ್ಕೆ ಮರುಮತಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹಾದಿಯಾರ ಪತಿ ಶಫಿನ್ ಜಹಾನ್ ಕಳೆದ ವರ್ಷ ನವೆಂಬರ್‌ನಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನ್ನ ಪತ್ನಿಯನ್ನು ಧಾರ್ಮಿಕ ಪಂಡಿತರೊಬ್ಬರು ಮೂರು ಗಂಟೆಗಳಿಗೂ ಅಧಿಕ ಸಮಯ ಸಮಾಲೋಚನೆ ನಡೆಸಿ ಹಿಂದೂ ಧರ್ಮಕ್ಕೆ ಮರಳುವಂತೆ ಮನಪರಿವರ್ತನೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಶಫಿನ್ ತಮ್ಮ ದೂರಿನಲ್ಲಿ ತಿಳಿಸಿದ್ದರು.
ಸದ್ಯ ಹಾದಿಯಾ ತನ್ನ ಹೆತ್ತವರ ಜೊತೆಗಿದ್ದು, ತನ್ನ ಮಗಳನ್ನು ಲವ್ ಜಿಹಾದ್ ಮೂಲಕ ಮುಸ್ಲಿಂ ವ್ಯಕ್ತಿ ವಿವಾಹವಾಗಿದ್ದಾನೆ ಎಂದು ಆಕೆಯ ಮನೆಯವರು ಆರೋಪಿಸಿದ್ದಾರೆ. ಈ ಪ್ರಕರಣವು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ.