×
Ad

ಫೆಬ್ರವರಿ 24ರಿಂದ ರಾಹುಲ್ ಗಾಂಧಿ ಕರ್ನಾಟಕ ಪ್ರವಾಸ

Update: 2018-02-21 19:49 IST

ಹೊಸದಿಲ್ಲಿ, ಫೆ.21: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಫೆಬ್ರವರಿ 24ರಿಂದ ಮೂರು ದಿನಗಳ ಕಾಲ ಕರ್ನಾಟಕ ಪ್ರವಾಸ ನಡೆಸಲು ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಚುನಾವಣಾ ಪ್ರಚಾರದ ಸಲುವಾಗಿ ಎರಡನೇ ಬಾರಿ ರಾಜ್ಯಕ್ಕೆ ಆಗಮಿಸುತ್ತಿರುವ ರಾಹುಲ್ ಗಾಂಧಿ ಈ ಸಲ ಮುಂಬೈ-ಕರ್ನಾಟಕ ಭಾಗದ ಜಿಲ್ಲೆಗಳಾದ ಬೆಳಗಾಂ, ವಿಜಯಪುರ, ಬಾಗಲಕೋಟೆ ಮತ್ತು ಧಾರವಾಡಗಳಲ್ಲಿ ಸಭೆಗಳನ್ನು ನಡೆಸಲಿದ್ದಾರೆ.

ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಜ್ಯಾದ್ಯಂತ ಜನಾಶೀರ್ವಾದ ಯಾತ್ರೆಯನ್ನು ಹಮ್ಮಿಕೊಂಡಿದ್ದು, ಫೆಬ್ರವರಿ 10ರಿಂದ 13ರವರೆಗೆ ಮೂರು ದಿನಗಳ ಪ್ರವಾಸದಲ್ಲಿ ಆಗಮಿಸಿದ್ದ ರಾಹುಲ್ ಗಾಂಧಿ ಹೈದರಾಬಾದ್-ಕರ್ನಾಟಕ ಭಾಗದ ಜಿಲ್ಲೆಗಳಿಗೆ ಭೇಟಿ ನೀಡಿದ್ದರು.

ಎರಡನೇ ಹಂತದ ಭೇಟಿಯ ವೇಳೆ ಕಾಂಗ್ರೆಸ್ ಅಧ್ಯಕ್ಷರು ಹಲವು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ, ವಿವಿಧ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ ಮತ್ತು ಜೊತೆಗೆ ಈ ವೇಳೆ ಮ್ಯಾರಥಾನ್‌ಗೂ ಚಾಲನೆ ನೀಡಲಿದ್ದಾರೆ ಎಂದು ಎಐಸಿಸಿಯ ಪ್ರಾದೇಶಿಕ ಪ್ರಭಾರ ಕಾರ್ಯದರ್ಶಿ ಮಣಿಕಮ್ ಠಾಗೋರ್ ತಿಳಿಸಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಕೇವಲ ಮಹಿಳೆಯರು ಮಾತ್ರ ಭಾಗವಹಿಸಲಿರುವ ಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ ಎಂದವರು ತಿಳಿಸಿದ್ದಾರೆ.

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ದಿನಾಂಕವು ಇನ್ನು ಕೂಡಾ ನಿಗದಿಯಾಗಿಲ್ಲ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿಯ ಅಗ್ರ ಪಂಕ್ತಿಯ ನಾಯಕರು ಈಗಲೇ ರಾಜ್ಯಕ್ಕೆ ಆಗಮಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News