ಬುಂದೇಲ್‌ಖಂಡ್‌ಗೆ 2,000 ಕೋಟಿ ರೂ. ಭದ್ರತಾ ಕಾರಿಡಾರ್ ಘೋಷಿಸಿದ ಪ್ರಧಾನಿ
ಹೊಸದಿಲ್ಲಿ, ಫೆ.21: ಬಜೆಟ್‌ನಲ್ಲಿ ಉಲ್ಲೇಖಿಸಲಾಗಿರುವ ಎರಡು ಭದ್ರತಾ ಕೈಗಾರಿಕಾ ಕಾರಿಡಾರ್‌ಗಳ ಪೈಕಿ ಒಂದನ್ನು ಉತ್ತರ ಪ್ರದೇಶದ ಬುಂದೇಲ್‌ಖಂಡ್‌ನಲ್ಲಿ ನಿರ್ಮಿಸಲಾಗುವುದು. ಈ ಕಾರಿಡಾರ್ ಮೂಲಕ 20,000 ಬಂಡವಾಳ ಹೂಡಿಕೆ ಸಾಧಿಸುವ ನಿರೀಕ್ಷೆಯಿದ್ದು ಎರಡೂವರೆ ಲಕ್ಷ ಜನರಿಗೆ ಉದ್ಯೋಗ ಒದಗಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2018ರ ಹೂಡಿಕೆದಾರರ ಸಮ್ಮೇಳನದಲ್ಲಿ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಅತ್ಯಂತ ಹಿಂದುಳಿದ ಪ್ರದೇಶವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಕಾರಿಡಾರನ್ನು ಬುಂದೇಲ್‌ಖಂಡ್‌ನಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಉತ್ತರ ಪ್ರದೇಶ ಸರಕಾರಕ್ಕೆ ಸಾಧಿಸುವ ಸಾಮರ್ಥ್ಯವಿದೆ ಎಂದು ತಿಳಿಸಿದ ಪ್ರಧಾನಿ, ರಾಜ್ಯದ ಅಭಿವೃದ್ಧಿಗೆ ನೀತಿ, ಯೋಜನೆ ಮತ್ತು ನಿರ್ವಹಣೆಯ ಅಗತ್ಯವಿದೆ. ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ರಾಜ್ಯದ ಜನರು ಜೊತೆಯಾಗಿ ಅತ್ಯುತ್ತಮ ನಿರ್ವಹಣೆ ನೀಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಹೂಡಿಕೆದಾರರ ಸಮ್ಮೇಳನ ಮತ್ತು ಕೈಗಾರಿಕೋದ್ಯಮಿಗಳ ಸಭೆ ನಡೆಸಿರುವುದು ಒಂದು ದೊಡ್ಡ ಬದಲಾವಣೆಯ ಸೂಚನೆಯಾಗಿದೆ. ಆದಿತ್ಯನಾಥ್ ಸರಕಾರದ ಬಗ್ಗೆ ಹಿಂದಿದ್ದ ಋಣಾತ್ಮಕ ಕಲ್ಪನೆಗಳನ್ನು ತೊಡೆದುಹಾಕಿ ಗುಣಾತ್ಮಕ ಬದಲಾವಣೆಯ ಮೂಲಕ ಜನರಲ್ಲಿ ವಿಶ್ವಾಸ ಮೂಡುವಂತೆ ಮಾಡಿದ್ದಾರೆ ಎಂದು ಪ್ರಧಾನಿ ಮುಖ್ಯಮಂತ್ರಿಯನ್ನು ಶ್ಲಾಘಿಸಿದ್ದಾರೆ.