ಕೇರಳ: ಮೃಗಾಲಯದಲ್ಲಿ ಸಿಂಹದ ಆವರಣದೊಳಕ್ಕೆ ನುಗ್ಗಿದ ವ್ಯಕ್ತಿ!
ತಿರುವನಂತಪುರಂ, ಫೆ.21: ಇಲ್ಲಿನ ಮೃಗಾಲಯವೊಂದರಲ್ಲಿ ಸಿಂಹವಿದ್ದ ಆವರಣದೊಳಕ್ಕೆ ವ್ಯಕ್ತಿಯೊಬ್ಬ ಜಿಗಿದ ಘಟನೆ ನಡೆದಿದ್ದು, ಆತನನ್ನು ಗಮನಿಸಿದ ಸಿಬ್ಬಂದಿ ಹರಸಾಹಸಪಟ್ಟು ರಕ್ಷಿಸಿದ್ದಾರೆ.
“ಸಿಂಹದೊಂದಿಗೆ ಮಾತನಾಡಲು ಅಲ್ಲಿಗೆ ಹೋಗಿದ್ದೆ” ಎಂದು ಈ ದುಸ್ಸಾಹಸಕ್ಕಿಳಿದ ಮುರುಗನ್ ಹೇಳಿದ್ದಾನೆ. ವಿಶ್ರಾಂತಿ ಪಡೆಯುತ್ತಿದ್ದ ಸಿಂಹಿಣಿ ಬಳಿ ತೆರಳಿದ ಆತ ಕೈ ತೋರಿಸಿದ ಎಂದು ಪ್ರವಾಸಿಗರು ಹೇಳಿದ್ದಾರೆ.
ಮುರುಗನ್ ಗೋಡೆಯನ್ನೇರಿ ಸಿಂಹ ಇರುವ ಪ್ರದೇಶಕ್ಕೆ ಹೋಗುವುದನ್ನು ಗಮನಿಸಿ ಕಾವಲುಗಾರ ಸಿಬ್ಬಂದಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಅಲ್ಲಿಗೆ ತೆರಳಿದ ಸಿಬ್ಬಂದಿ ಸಿಂಹಿಣಿಯ ಗಮನವನ್ನು ಬೇರೆಡೆಗೆ ಸೆಳೆದು ಮುರುಗನ್ ನನ್ನು ಎಳೆದುಕೊಂಡು ಬಂದಿದ್ದಾರೆ.
ಪಾಲಕ್ಕಾಡ್ ನಿವಾಸಿಯಾಗಿರುವ ಮುರುಗನ್ ಕೆಲ ವಾರಗಳಿಂದ ಮನೆಯಿಂದ ನಾಪತ್ತೆಯಾಗಿದ್ದ. ಕುಟುಂಬಸ್ಥರು ಮುರುಗನ್ ನಾಪತ್ತೆಯಾಗಿರುವ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು.
ಈ ಎಲ್ಲಾ ಘಟನೆಗಳು ನಡೆದಾಗ ಮೃಗಾಲಯದ ಸಿಬ್ಬಂದಿ ಆತಂಕದಲ್ಲಿದ್ದರೆ, ಮೃಗಾಲಯಕ್ಕೆ ಆಗಮಿಸಿದ್ದವರು ಕುತೂಹಲದಿಂದ ನೋಡುತ್ತಿದ್ದರು. ಆದರೆ ಸಿಬ್ಬಂದಿ ರಕ್ಷಿಸಿದ ನಂತರ ‘ನಾನು ಸಿಂಹವನ್ನು ಮಾತನಾಡಿಸಲು ಅಲ್ಲಿಗೆ ಹೋಗಿದ್ದೆ’ ಎಂಬ ಮುರುಗನ್ ಮಾತುಗಳನ್ನು ಕೇಳಿ ಎಲ್ಲರೂ ಒಮ್ಮೆ ನಕ್ಕಿದ್ದಾರೆ.
#WATCH: Man enters Lion enclosure at Thiruvananthapuram Zoo. Later stopped & removed by zoo officials. pic.twitter.com/CU7AxijWBs
— ANI (@ANI) February 21, 2018