ಪಿಎಫ್ ಐಯನ್ನು ನಿಷೇಧಿಸಿದ ಜಾರ್ಖಂಡ್ ಸರಕಾರ
Update: 2018-02-21 20:37 IST
ಜಾರ್ಖಂಡ್, ಫೆ.21: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರು ಭಯೋತ್ಪಾದಕ ಸಂಘಟನೆ ಐಸಿಸ್ ನಿಂದ ಪ್ರಭಾವಿತರಾಗಿದ್ದಾರೆ ಎಂಬ ಆರೋಪದಲ್ಲಿ ಜಾರ್ಖಂಡ್ ಸರಕಾರವು ಸಂಘಟನೆಯನ್ನು ನಿಷೇಧಿಸಿದೆ.
ಪಾಕುರ್ ಜಿಲ್ಲೆಯಲ್ಲಿ ಪಿಎಫ್ ಐ ಹೆಚ್ಚು ಸಕ್ರಿಯವಾಗಿದೆ ಎಂದೂ ಸರಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ. “ಕೇರಳದಲ್ಲಿ ಆರಂಭವಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರು ಐಸಿಸ್ ನಿಂದ ಪ್ರಭಾವಿತರಾಗಿದ್ದಾರೆ. ದಕ್ಷಿಣ ಭಾರತೀಯ ರಾಜ್ಯಗಳಿಂದ ಪಿಎಫ್ ಐನ ಕೆಲ ಸದಸ್ಯರು ರಹಸ್ಯವಾಗಿ ಸಿರಿಯಾಕ್ಕೆ ತೆರಳಿದ್ದು, ಐಸಿಸ್ ಸೇರಿದ್ದಾರೆ” ಎಂದು ಸರಕಾರದ ಹೇಳಿಕೆ ತಿಳಿಸಿದೆ.
ಕೆಲ ದಿನಗಳ ಹಿಂದಷ್ಟೇ ಪಾಕುರ್ ನಲ್ಲಿ ಪಿಎಫ್ ಐ ಸಂಸ್ಥಾಪನಾ ದಿನವನ್ನಾಚರಿಸಲು ಸಿದ್ಧತೆಯನ್ನು ನಡೆಸಿತ್ತು. ಆ ದಿನ ಸ್ಕೂಲ್ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಪೋಸ್ಟರ್ ಗಳನ್ನು ಅಂಟಿಸಲಾಗಿತ್ತು. ನಂತರ ಪೊಲೀಸರು ಪೋಸ್ಟರ್ ಗಳನ್ನು ತೆಗೆದು ಹಾಕಿದ್ದರು.