“ರಾಮಮಂದಿರದ ಪ್ರತಿರೂಪದಂತೆ ಅಯೋಧ್ಯೆಯ ರೈಲು ನಿಲ್ದಾಣಕ್ಕೆ ಪ್ರಸ್ತಾವ”

Update: 2018-02-21 17:54 GMT

ಹೊಸದಿಲ್ಲಿ, ಫೆ.21: ಅಯೋಧ್ಯೆಯ ರೈಲು ನಿಲ್ದಾಣವನ್ನು ರಾಮಮಂದಿರದ ಪ್ರತಿರೂಪದಂತೆ ನಿರ್ಮಿಸಲು ರೈಲ್ವೇ ಸಚಿವಾಲಯ ಕೇಂದ್ರ ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಲಿದೆ ಎಂದು ರೈಲ್ವೇ ಇಲಾಖೆಯ ಸಹಾಯಕ ಸಚಿವ ಮನೋಜ್ ಸಿನ್ಹ ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ 200 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಇದರಲ್ಲಿ ರೈಲು ನಿಲ್ದಾಣವನ್ನು 80 ಕೋಟಿ ರೂ. ವೆಚ್ಚದಲ್ಲಿ ಪುನರ್ನಿರ್ಮಿಸುವ ಕಾಮಗಾರಿಯೂ ಸೇರಿದೆ. ರಾಮಭಕ್ತರು ಅಯೋಧ್ಯೆಗೆ ಸುಲಭವಾಗಿ ತಲುಪುವಂತಾಗಲು ಅಯೋಧ್ಯೆಯನ್ನು ರೈಲು ಮಾರ್ಗದ ಮೂಲಕ ಇಡೀ ದೇಶಕ್ಕೆ ಸಂಪರ್ಕಿಸಲು ಸರಕಾರ ಆಸಕ್ತವಾಗಿದೆ. ಪುನರ್ನಿರ್ಮಾಣಗೊಳ್ಳಲಿರುವ ರೈಲು ನಿಲ್ದಾಣ ಆಧುನಿಕ ವ್ಯವಸ್ಥೆಗಳನ್ನು ಒಳಗೊಳ್ಳಲಿದೆ ಎಂದವರು ಹೇಳಿದರು.

ಫೈಝಾಬಾದ್-ಬಾರಬಂಕಿ ರೈಲ್ವೇ ಹಳಿಯನ್ನು ದ್ವಿಪಥಗೊಳಿಸುವ ಹಾಗೂ ವಿದ್ಯುದೀಕರಣಗೊಳಿಸುವ ಕಾಮಗಾರಿಗೆ 1,116 ಕೋಟಿ ರೂ. ಖರ್ಚು ಮಾಡಲಾಗಿದ್ದು ಕಾಮಗಾರಿ 2022ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಸಿನ್ಹ ತಿಳಿಸಿದರು. ಬಿಜೆಪಿ ಸಂಸದ ವಿನಯ್ ಕಟಿಯಾರ್ ಮಾತನಾಡಿ, ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಿಂದಲೂ ಅಯೋಧ್ಯೆ ರೈಲ್ವೇ ನಿಲ್ದಾಣದ ಅಭಿವೃದ್ಧಿಯ ಕುರಿತು ಚರ್ಚಿಸಲಾಗುತ್ತಿತ್ತು. ರೈಲು ನಿಲ್ದಾಣ ಪುನನಿರ್ಮಾಣ ಕಾಮಗಾರಿ ಪೂರ್ಣಗೊಂಡೊಡನೆ ರಾಮಮಂದಿರ ನಿರ್ಮಿಸುವ ಕಾರ್ಯ ಆರಂಭವಾಗಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News