ಪ್ರತ್ಯೇಕತಾವಾದಿಗಳಿಗೆ ಬೆಂಬಲವಿಲ್ಲ: ಕೆನಡಾ ಪ್ರಧಾನಿ ಭರವಸೆ
ಚಂಡೀಗಡ, ಫೆ.21: ಪಂಜಾಬ್‌ಗೆ ಭೇಟಿ ನೀಡಿದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ ಜೊತೆ ನಡೆಸಿದ ಮಾತುಕತೆಯ ಸಂದರ್ಭ ಪಂಜಾಬ್ ಮುಖ್ಯಮಂತ್ರಿ ಕ್ಯಾ ಅಮರಿಂದರ್ ಸಿಂಗ್ ಖಲಿಸ್ತಾನ್ ಚಳವಳಿಯ ಬಗ್ಗೆ ಪ್ರಸ್ತಾಪಿಸಿದರು . ಭಾರತ ಅಥವಾ ವಿಶ್ವದ ಯಾವುದೇ ದೇಶಗಳಲ್ಲಿ ನಡೆಯುವ ಪ್ರತ್ಯೇಕತಾವಾದಿ ಚಟುವಟಿಕೆಗೆ ಕೆನಡಾ ಪ್ರೋತ್ಸಾಹ ನೀಡುವುದಿಲ್ಲ ಎಂದು ಈ ಸಂದರ್ಭ ಜಸ್ಟಿನ್ ಟ್ರೂಡೊ ಭರವಸೆ ನೀಡಿದರು ಎಂದು ವರದಿ ತಿಳಿಸಿದೆ. ಪಂಜಾಬ್‌ನಲ್ಲಿ ನಡೆಯುವ ದ್ವೇಷಪೂರಿತ ಅಪರಾಧ ಚಟುವಟಿಕೆಗಳಲ್ಲಿ ಶಾಮೀಲಾಗಿರುವ, ಇದೀಗ ಕೆನಡಾದಲ್ಲಿ ನೆಲೆಸಿರುವ 9 ಮಂದಿ ‘ಎ’ ಶ್ರೇಣಿಯ ವ್ಯಕ್ತಿಗಳ ಪಟ್ಟಿಯನ್ನು ಪಂಜಾಬ್ ಮುಖ್ಯಮಂತ್ರಿ ಕೆನಡಾದ ಪ್ರಧಾನಿಗೆ ನೀಡಿದರು. ಈ ಸಂದರ್ಭ ನಡೆದ ಮಾತುಕತೆಯಲ್ಲಿ ಕೆನಡಾದ ರಕ್ಷಣಾ ಸಚಿವ ಹರ್ಜಿತ್ ಸಜ್ಜನ್ , ಪಂಜಾಬ್‌ನ ಸ್ಥಳೀಯಾಡಳಿತ ಸಚಿವ ನವಜೋತ್ ಸಿಂಗ್ ಸಿದು ಉಪಸ್ಥಿತರಿದ್ದರು.
ಕೆನಡಾದ ಕ್ವಿಬೆಕ್ ಪ್ರಾಂತ್ಯದಲ್ಲಿ ನಡೆದ ಪ್ರತ್ಯೇಕತಾವಾದಿಗಳ ಚಳವಳಿಯನ್ನು ಉಲ್ಲೇಖಿಸಿದ ಟ್ರೂಡೊ, ಹಿಂಸಾಚಾರದಿಂದ ಉಂಟಾಗುವ ಅಪಾಯಗಳ ಬಗ್ಗೆ ತನಗೆ ಅರಿವಿದೆ ಎಂದು ತಿಳಿಸಿದರು. ಪಂಜಾಬ್‌ನಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳಿಗೆ ಹಣಕಾಸಿನ ನೆರವು ನೀಡುತ್ತಿರುವ ಹಾಗೂ ಶಸ್ತ್ರಾಸ್ತ್ರ ಪೂರೈಸುತ್ತಿರುವ , ಪಂಜಾಬ್‌ನ ಯುವಜನರಲ್ಲಿ ಪ್ರತ್ಯೇಕತಾವಾದ ಭಾವನೆ ಬಿತ್ತುತ್ತಿರುವ ಕೆನಡಾ ಮೂಲದ 9 ‘ಎ’ ಶ್ರೇಣಿಯ ವ್ಯಕ್ತಿಗಳ ಪಟ್ಟಿಯನ್ನು ಪಂಜಾಬ್ ಮುಖ್ಯಮಂತ್ರಿ ನೀಡಿದರು. ಭಾರತೀಯ ಮೂಲದ, ಇದೀಗ ಕೆನಡಾದ ನಿವಾಸಿಗಳಾಗಿರುವ ಕೆಲವು ವ್ಯಕ್ತಿಗಳು ಪಂಜಾಬ್‌ನ ಹಿಂಸಾಚಾರ ಪ್ರಕರಣದಲ್ಲಿ ಪಾಲ್ಗೊಂಡಿರುವ ಶಂಕೆಯಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಮರೀಂದರ್ ಸಿಂಗ್ ಒತ್ತಾಯಿಸಿದರು.
ಭಾರತೀಯ ಸಂವಿಧಾನದಲ್ಲಿ ವಾಕ್ ಸ್ವಾತಂತ್ರಕ್ಕೆ ಪ್ರಾಧಾನ್ಯತೆ ನೀಡಲಾಗಿದ್ದರೂ, ಪಂಜಾಬ್‌ನ ಜನರಿಂದ ತಿರಸ್ಕೃತಗೊಂಡಿರುವ ಕೆಲವರು ಹಿಂಸಾಚಾರವನ್ನು ಪ್ರತಿಪಾದಿಸುತ್ತಿದ್ದು ಇವರು ವಾಕ್‌ಸ್ವಾತಂತ್ರದ ಹಕ್ಕನ್ನು ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಪ್ರತ್ಯೇಕ ಸಿಖ್ ರಾಷ್ಟ್ರದ ಆಗ್ರಹದೊಂದಿಗೆ ವೇದಿಕೆ ರಚಿಸಿಕೊಂಡು ಕಣಕ್ಕಿಳಿದಿದ್ದ ಎಲ್ಲರೂ ಠೇವಣಿಯನ್ನೂ ಕಳೆದುಕೊಂಡಿರುವುದು ಉಲ್ಲೇಖನೀಯ ಎಂದು ಅಮರಿಂದರ್ ಸಿಂಗ್ ಹೇಳಿದರು. ಬಳಿಕ ಕೆನಡಾ ಪ್ರಧಾನಿ ತಮ್ಮ ಕುಟುಂಬದ ಸದಸ್ಯರೊಡನೆ ಸ್ವರ್ಣಮಂದಿರಕ್ಕೆ ಭೇಟಿ ನೀಡಿ ಅಲ್ಲಿ ಸಂಪ್ರದಾಯದಂತೆ ‘ಸೇವೆ’ ಸಲ್ಲಿಸಿದರು.