ಬಿಪಿನ್ ರಾವತ್ ಹೇಳಿಕೆಯಲ್ಲಿ ಧಾರ್ಮಿಕ, ರಾಜಕೀಯ ಉದ್ದೇಶವಿಲ್ಲ: ಸೇನೆ

Update: 2018-02-22 15:52 GMT

   ಹೊಸದಿಲ್ಲಿ,ಫೆ.22: ಈಶಾನ್ಯ ಭಾರತದಲ್ಲಿ ಮುಸ್ಲಿಂ ಪರ ಪಕ್ಷವೊಂದರ ಬೆಳವಣಿಗೆಯ ಬಗ್ಗೆ ಸೇನಾ ವರಿಷ್ಠ ಬಿಪಿಎನ್ ರಾವತ್ ಅವರ ಹೇಳಿಕೆಯನ್ನು ಸೇನೆಯು ಗುರುವಾರ ಸಮರ್ಥಿಸಿದೆ. ಸೇನಾ ವರಿಷ್ಠರ ಹೇಳಿಕೆಯಲ್ಲಿ ಯಾವುದೇ ಧಾರ್ಮಿಕ ಹಾಗೂ ರಾಜಕೀಯ ಉದ್ದೇಶವಿರಲಿಲ್ಲವೆಂದು ಅದು ಹೇಳಿದೆ.

ಬಿಪಿನ್ ರಾವತ್‌ರ ಈ ಹೇಳಿಕೆಗೆ ಅಖಿಲ ಭಾರತ ಸಂಯುಕ್ತ ಪ್ರಜಾತಾಂತ್ರಿಕ ರಂಗ (ಎಐಯುಡಿಎಫ್)ನ ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್ ತೀವ್ರವಾಗಿ ವಿರೋಧಿಸಿದ್ದು, ಸಂವಿಧಾನಕ್ಕೆ ವಿರುದ್ಧವಾಗಿ ಸೇನಾ ವರಿಷ್ಠರು ರಾಜಕೀಯದಲ್ಲಿ ತೊಡಗಿದ್ದಾರೆಂದು ಆರೋಪಿಸಿದ ಕೆಲವೇ ಗಂಟೆಗಳ ಬಳಿಕ ಸೇನೆ ಈ ಪ್ರತಿಕ್ರಿಯೆ ನೀಡಿದೆ.

‘‘ಜನರಲ್ ಬಿಪಿನ್ ರಾವತ್, ರಾಜಕೀಯ ಹೇಳಿಕೆಯನ್ನು ನೀಡಿರುವುದು ಆಘಾತಕಾರಿಯಾಗಿದೆ. ಪ್ರಜಾತಾಂತ್ರಿಕ ಹಾಗೂ ಜಾತ್ಯತೀತ ಮೌಲ್ಯಗಳನ್ನು ಆಧರಿಸಿ ಕಾರ್ಯನಿರ್ವಹಿಸುವ ರಾಜಕೀಯ ಪಕ್ಷವೊಂದು, ಬಿಜೆಪಿಗಿಂತ ವೇಗವಾಗಿ ಬೆಳೆಯುತ್ತಿರುವುದಕ್ಕೆ ಸೇನಾವರಿಷ್ಠರು ಯಾಕೆ ಆತಂಕಗೊಳ್ಳಬೇಕು. ದೊಡ್ಡ ಪಕ್ಷಗಳ ದುರಾಡಳಿತದ ಕಾರಣದಿಂದಾಗಿ ಎಐಯುಡಿಎಫ್, ಎಎಪಿಯಂತಹ ಪರ್ಯಾಯ ಪಕ್ಷಗಳು ಬೆಳೆಯುತ್ತಿವೆ ಎಂದು ಅಜ್ಮಲ್ ಟ್ವೀಟ್ ಮಾಡಿದ್ದಾರೆ.

  ಈಶಾನ್ಯ ಭಾರತದಲ್ಲಿ ಪಾಕಿಸ್ತಾನವು ಪ್ರಚ್ಛನ್ನ ಸಮರ ನಡೆಸುತ್ತಿದೆ ಹಾಗೂ ಚೀನಾವು ಬಾಂಗ್ಲಾದೇಶದ ವಲಸಿಗರನ್ನು ಭಾರತದೊಳಗೆ ನುಸುಳುವಂತೆ ಮಾಡಲು ಯೋಜಿತ ಪ್ರಯತ್ನವನ್ನು ನಡೆಸುತ್ತಿದೆ ಎಂದು ಜನರಲ್ ಬಿಪಿನ್ ರಾವತ್ ಹೇಳಿದ ಬಳಿಕ ವಿವಾದ ಭುಗಿಲೆದ್ದಿತ್ತು. ಅಸ್ಸಾಂನಲ್ಲಿ ಹಲವಾರು ಜಿಲ್ಲೆಗಳಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಅಜ್ಮಲ್‌ರ ಎಐಯುಡಿಎಫ್ ಪಕ್ಷವು ತ್ವರಿತ ಬೆಳವಣಿಗೆಯನ್ನು ಕಾಣುತ್ತಿದೆಯೆಂಬ ವರದಿಗಳನ್ನು ಪ್ರಸ್ತಾಪಿಸುತ್ತಾ ರಾವತ್ ಈ ಹೇಳಿಕೆ ನೀಡಿದ್ದರು. 1980ರ ದಶಕದಲ್ಲಿದ್ದ ಬಿಜೆಪಿಗಿಂತ ಈಗ ಎಐಯುಡಿಎಫ್ ಪಕ್ಷವು ಹೆಚ್ಚು ವೇಗವಾಗಿ ಬೆಳೆಯುತ್ತಿದೆಯೆಂಬ ವರದಿಗಳನ್ನು ಕೂಡಾ ರಾವತ್ ಪ್ರಸ್ತಾಪಿಸಿದ್ದರು.

 ರಾವತ್‌ರ ಈ ಹೇಳಿಕೆಯನ್ನು ಇಂದು ತನ್ನ ಟ್ವೀಟ್‌ನಲ್ಲಿ ಕಟುವಾಗಿ ಪ್ರತಿಕ್ರಿಯಿಸಿರು ಅಜ್ಮಲ್ ಅವರು, ‘‘ ಸೇನಾ ವರಿಷ್ಠರ ಹೇಳಿಕೆಯಲ್ಲಿ ಯಾವುದೇ ರಾಜಕೀಯವಿಲ್ಲದಿದ್ದಲ್ಲಿ, ಅವರು ಯಾಕೆ ತನ್ನ ಭಾಷಣದಲ್ಲಿ ಭಾರತೀಯ ನಾಗರಿಕರಿಂದ ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಪಕ್ಷವೊಂದರ ಪ್ರತಿನಿಧಿಗಳನ್ನು ಎಳೆದು ತರುತ್ತಿದ್ದಾರೆ’’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಹೊಸದಿಲ್ಲಿಯಲ್ಲಿ ಬುಧವಾರ ಈಶಾನ್ಯ ಭಾರತದಸ ಅಭಿವೃದ್ಧಿ ಕುರಿತ ಸಮಾವೇಶವೊಂದರಲ್ಲಿ, ಈಶಾನ್ಯ ಭಾರತದಲ್ಲಿ ಎಐಯುಡಿಎಫ್ ಎಂಬ ಪಕ್ಷವೊಂದಿದ್ದು, ಅದು ಕಳೆದ ಕೆಲವು ವರ್ಷಗಳಲ್ಲಿ ಬಿಜೆಪಿಗಿಂತಲೂ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಅಸ್ಸಾಂ ರಾಜ್ಯದಲ್ಲಿ ಆ ಪಕ್ಷವು ತ್ವರಿತಗತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ ಎಂದು ಹೇಳಿದ್ದರು.

ಮುಸ್ಲಿಮರ ಹಿತಾಸಕ್ತಿಗಳ ರಕ್ಷಣೆಗಾಗಿ ಹೋರಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿರುವ ಎಐಯುಡಿಎಫ್ ಪಕ್ಷವು 2005ರಲ್ಲಿ ಸ್ಥಾಪಿಸಲ್ಪಟ್ಟಿತ್ತು. ಪ್ರಸ್ತುತ ಆ ಪಕ್ಷವು ಮೂವರು ಲೋಕಸಭಾ ಸದಸ್ಯರನ್ನು ಹಾಗೂ ಅಸ್ಸಾಂ ವಿಧಾನಸಭೆಯಲ್ಲಿ 13 ಶಾಸಕರನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News