ದೇಶದಲ್ಲಿ ಬ್ಯಾಂಕುಗಳಿಗೆ ಇಚ್ಛಾಪೂರ್ವಕ ಸುಸ್ತಿದಾರರಿಂದ 1.1 ಲಕ್ಷ ಕೋಟಿ ರೂ. ಬಾಕಿ!

Update: 2018-02-23 06:21 GMT

ಹೊಸದಿಲ್ಲಿ, ಫೆ. 23: ದೇಶದಲ್ಲಿ ಬ್ಯಾಂಕುಗಳಿಗೆ ಇಚ್ಛಾಪೂರ್ವಕ ಸುಸ್ತಿದಾರರಿಂದ ಎಷ್ಟು ಬಾಕಿ ಇದೆ ಎಂಬ ಅಂಕಿ ಅಂಶ ನೋಡಿದರೆ ನೀವು ಹೌಹಾರುತ್ತೀರಿ. 2017ರ ಸೆಪ್ಟೆಂಬರ್ 30ರವರೆಗೆ ಬ್ಯಾಂಕ್‌ಗಳಿಗೆ ಸುಸ್ತಿ ಬಾಕಿ ಇರುವ 1.1 ಲಕ್ಷ ಕೋಟಿ ರೂಪಾಯಿಗಳನ್ನು ಇಚ್ಛಾಪೂರ್ವಕ ಸುಸ್ತಿ ಎಂದು ಪರಿಗಣಿಸಲಾಗಿದೆ. ಅಂದರೆ ಮರುಪಾವತಿಸುವ ಸಾಮರ್ಥ್ಯ ಇದ್ದೂ, ಪಾವತಿಸದೇ ಸುಸ್ತಿ ಉಳಿಸಿಕೊಂಡಿರುವ ಮೊತ್ತ ಇದಾಗಿದೆ.

ವಿವಿಧ ಬ್ಯಾಂಕ್‌ಗಳು ಸಲ್ಲಿಸಿರುವ ವಸೂಲಾತಿ ದಾವೆಗಳನ್ನು ವಿಶ್ಲೇಷಿಸಿದಾಗ ಸುಮಾರು ಒಂಬತ್ತು ಸಾವಿರ ಇಂಥ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಲ್ಲೂ ಅಗ್ರ 11 ಸಾಲಗಾರ ಕಂಪನಿಗಳು ಒಂದು ಸಾವಿರ ಕೋಟಿಗಿಂತ ಅಧಿಕ ಸುಸ್ತಿಬಾಕಿ ಇರಿಸಿಕೊಂಡಿವೆ. ಈ ಹನ್ನೊಂದು ಕಂಪನಿಗಳು ಬ್ಯಾಂಕ್‌ಗಳಿಗೆ ಪಾವತಿಸಬೇಕಾದ ಒಟ್ಟು ಸುಸ್ತಿ ಮೌಲ್ಯ 26 ಸಾವಿರ ಕೋಟಿ !.

25 ಲಕ್ಷಕ್ಕಿಂತ ಅಧಿಕ ಬಾಕಿಯ ಪ್ರಕರಣಗಳಲ್ಲಿ ವಸೂಲಾತಿ ದಾವೆಯನ್ನು ಹೂಡಲಾಗಿದ್ದು, ಇದರ ಮಾಹಿತಿ ಸಾರ್ವಜನಿಕವಾಗಿ ಲಭ್ಯ. ಇದನ್ನು ವಿಶ್ಲೇಷಿಸಿದಾಗ ಈ ದೊಡ್ಡ ಮೊತ್ತದ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಜತಿನ್ ಮೆಹ್ತಾ ಪ್ರವರ್ತಕರಾಗಿರುವ ವಿನ್‌ಸಮ್ ಡೈಮಂಡ್ಸ್ ಆ್ಯಂಡ್ ಜ್ಯುವೆಲ್ಲರಿ ಲಿಮಿಟೆಡ್ ಮತ್ತು ಫಾರೆವರ್ ಪ್ರಿಶಿಸಸ್ ಜ್ಯುವೆಲ್ಲರಿ ಆ್ಯಂಡ್ ಡೈಮಂಡ್ಸ್ ಲಿಮಿಟೆಡ್ ವಿವಿಧ ಬ್ಯಾಂಕುಗಳಿಗೆ 5000 ಕೋಟಿ ರೂಪಾಯಿ ಸುಸ್ತಿ ಬಾಕಿ ಉಳಿಸಿಕೊಂಡಿವೆ. ಮೆಹ್ತಾ ಇದೀಗ ಸೆಂಟ್ ಕಿಟ್ಸ್ ಆ್ಯಂಡ್ ನೆವಿಸ್‌ನ ಪ್ರಜೆಯಾಗಿದ್ದು, ಇದು ತೆರಿಗೆಗಳ್ಳರ ಸ್ವರ್ಗ ಎನಿಸಿಕೊಂಡ ದೇಶವಾಗಿದೆ. ಈ ದೇಶ ದೊಂದಿಗೆ ಭಾರತ ಗಡೀಪಾರು ಒಪ್ಪಂದವನ್ನು ಕೂಡಾ ಹೊಂದಿಲ್ಲ.

ವಿಜಯ್ ಮಲ್ಯ ಅವರ ಕಿಂಗ್‌ಫಿಶರ್ ಏರ್‌ಲೈನ್ಸ್ ಮೂರು ಸಾವಿರ ಕೋಟಿ, ಸಂದೀಪ್ ಜುಂಜುನ್‌ವಾಲಾ ಮಾಲಕತ್ವದ ಆರ್‌ಇಐ ಆಗ್ರೊ 2730 ಕೋಟಿ, ಪಿ.ಕೆ.ತಿವಾರಿ ಮಾಲಕತ್ವದ ಮಹೂವಾ ಮೀಡಿಯಾ 2416 ಕೋಟಿ ಹಾಗೂ ಝೂಮ್ ಡೆವಲಪರ್ಸ್‌ 2371 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡು, ಅಗ್ರ ಐದು ಸ್ಥಾನಗಳಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News