ದೃಢ ಸಂಕಲ್ಪ ಹಾಗೂ ಸ್ಥೈರ್ಯಗಳ ಬುನಾದಿಯಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಬೇಕಿದೆ: ನಹಾಸ್ ಮಾಲ
ದೆಹಲಿ,ಫೆ.23: ದೇಶದಲ್ಲಿಂದು ದಮನಿತರ ಧ್ವನಿಯನ್ನು ತಗ್ಗಿಸಲು ಸಂಘಟಿತವಾಗಿ ಕೆಲವು ಶಕ್ತಿಗಳು ಪ್ರಯತ್ನಿಸುತ್ತಿದೆ. ಆ ಮೂಲಕ ಸ್ವಾಭಿಮಾನದಿಂದ ವಂಚಿತಗೊಳಿಸಿ ಅವರ ಆತ್ಮವಿಶ್ವಾಸವನ್ನು ಕುಂದಿಸುವ ಯತ್ನವನ್ನು ದೃಢ ಸಂಕಲ್ಪ ಹಾಗೂ ಧೈರ್ಯದಿಂದ ಎದುರಿಸಿ, ಮುಂದಿನ ಪೀಳಿಗೆಗೆ ಉತ್ತಮವಾದ ಭವಿಷ್ಯವನ್ನು ರೂಪಿಸಬೇಕಿದೆ ಎಂದು ಎಸ್ ಐ ಓ ಅಖಿಲ ಭಾರತ ಅಧ್ಯಕ್ಷ ನಹಾಸ್ ಮಾಲ ಹೇಳಿದರು.
'ಆತ್ಮಾಭಿಮಾನವನ್ನು ಸಂರಕ್ಷಿಸೋಣ: ಭವಿಷ್ಯವನ್ನು ರೂಪಿಸೋಣ' ಎಂಬ ಧ್ಯೇಯವಾಕ್ಯದಡಿಯಲ್ಲಿ ದೆಹಲಿಯ ಜಾಮಿಯಾ ನಗರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್ ಐ ಓ) 2ನೇ ಅಖಿಲ ಭಾರತ ಸಮಾವೇಶದಲ್ಲಿ ಅಧ್ಯಕ್ಷ್ಯತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು. ಈ ಸಮಾಜದ ಬಗ್ಗೆ ಉತ್ತಮ ಕನಸು ಹೊಂದಿರುವ ಎಸ್ ಐ ಓ ಸಂಘಟನೆ, ಯಾವುದೇ ಸಂದರ್ಭದಲ್ಲಿಯೂ ತನ್ನ ಸಿದ್ಧಾಂತಗಳಲ್ಲಿ ರಾಜಿ ಮಾಡಿಕೊಳ್ಳದೆ ಈ ದೇಶದ ಯುವಜನರ ಹಾಗೂ ವಿದ್ಯಾರ್ಥಿಗಳ ಶಕ್ತಿಯಾಗಿ ಮುಂದುವರಿಯಲು ಸಾಧ್ಯವಾಗಿದೆ ಎಂದವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಜಲಾಲುದ್ದೀನ್ ಉಮರಿ, ನಮ್ಮ ದೇಶದಲ್ಲಿರುವ ದಿನನಿತ್ಯ ಉದ್ಭವಿಸುತ್ತಿರುವ ಸಮಸ್ಯೆಗಳಿಗೆ ಹಾಗೂ ದಲಿತ, ಮುಸ್ಲಿಂಮರು ಸೇರಿದಂತೆ ಇತರರ ಮೇಲೆ ಇಂದು ವ್ಯವಸ್ಥಿತವಾಗಿ ನಡೆಯುತ್ತಿರುವ ದೌರ್ಜನ್ಯಗಳಿಗೆ ಯಾವುದೇ ಸಂದರ್ಭದಲ್ಲಿ ತೀವ್ರವಾದವು ಉತ್ತರವಾಗಲು ಸಾಧ್ಯವಿಲ್ಲ. ತೀವ್ರವಾದವು ನಮ್ಮನ್ನು ಮತ್ತೆ ಕೆಳಗೆ ತಳ್ಳುತ್ತದೆ. ಆದ್ದರಿಂದ ನಮ್ಮ ಉದ್ದೇಶಗಳನ್ನು ಸಾಧಿಸಲು ನಿರಂತರವಾಗಿ ಹೋರಾಟ ನಡೆಸುತ್ತಿರಬೇಕು. ಈ ನಿಟ್ಟಿನಲ್ಲಿ ಎಸ್ ಐ ಓ ದೇಶದ ಇತರೆಲ್ಲ ವಿದ್ಯಾರ್ಥಿ ಸಂಘಟನೆಗೆ ಮಾದರಿ ಎಂದವರು ಅಭಿಪ್ರಾಯಪಟ್ಟರು.
ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಸೈಯದ್ ಸಾದತುಲ್ಲ ಹುಸೇನಿ, ಫೆಲೆಸ್ತೀನಿಯನ್ ಡಾ. ವಾಯೆಲ್ ಅಲ್ ಬತ್ತೆರ್ಕಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಎಸ್ ಐ ಓ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಖಲೀಕ್ ಅಹ್ಮದ್ ಖಾನ್ ಸಮಾವೇಶದಲ್ಲಿ ಪ್ರಾಸ್ತಾವಿಕ ಭಾಷಣಗೈದರು. ದೇಶದ ಎಲ್ಲಾ ರಾಜ್ಯಗಳಿಂದ ಸುಮಾರು 10,000 ದಷ್ಟು ಎಸ್ ಐ ಓ ಕಾರ್ಯಕರ್ತರು ಆಗಮಿಸಿದ್ದರು.