×
Ad

ಬಿಜೆಪಿಗೆ ನೀರವ್ ಮೋದಿಯಿಂದ 250 ಕೋಟಿ ರೂ. ಕಾಣಿಕೆ: ಶಿವಸೇನೆ ಆರೋಪ

Update: 2018-02-23 21:39 IST

ಮುಂಬೈ, ಫೆ.23: 11,400 ಕೋಟಿ ರೂ. ಪಿಎನ್‌ಬಿ ಹಗರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಶಿವಸೇನೆ, ನೀರವ್ ಮೋದಿ ಬಿಜೆಪಿಗೆ 250 ಕೋಟಿ ರೂ. ನೀಡಿದ್ದಾರೆ. ಬಿಜೆಪಿಯ ಚುನಾವಣಾ ಜಾಹೀರಾತುಗಳ ವೆಚ್ಚ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಕ್ಕೂ ಹಣ ನೀಡಿದ್ದಾರೆ ಎಂದು ಆರೋಪಿಸಿದೆ.

ಈ ಕುರಿತು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಬರೆದಿರುವ ಶಿವಸೇನೆ, ನೀರವ್ ಮೋದಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಖಜಾನೆಗೆ 250 ಕೋಟಿ ರೂ. ತುಂಬಿದ್ದಾರೆ ಎಂದು ಆರೋಪಿಸಿದೆ. ದೇಶದ ಆರ್ಥಿಕತೆಯನ್ನು ಪ್ರಧಾನಿ ಮೋದಿ ನಿಬಾಯಿಸುತ್ತಿರುವ ರೀತಿಯ ಬಗ್ಗೆ ಮೊದಲಿನಿಂದಲೂ ಟೀಕಿಸುತ್ತಲೇ ಬಂದಿರುವ ಶಿವಸೇನೆ, ಶ್ರೀಮಂತ ಕುಳಗಳು ಬ್ಯಾಂಕ್‌ಗಳಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗುತ್ತಿದ್ದಾರೆ. ಆದರೆ ಬಡವರ ಮೇಲೆ ಮಾತ್ರ ತೆರಿಗೆ ಹಾಗೂ ಇತರ ಶುಲ್ಕಗಳ ಹೊರೆಯನ್ನು ಹಾಕಲಾಗುತ್ತಿದೆ ಎಂದು ದೂರಿದೆ.

ನೀರವ್ ಮೋದಿ ಪ್ರಕರಣವು ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಪ್ರಧಾನಿ ಮೋದಿಯವರ ಭರವಸೆಯನ್ನು ಮಣ್ಣುಪಾಲು ಮಾಡಿದೆ. ನೀರವ್ ಮೋದಿ ಜನವರಿಯಲ್ಲೇ ದೇಶವನ್ನು ತೊರೆದಿದ್ದಾರೆ. ಆದರೆ ಕೆಲವು ವಾರಗಳ ಹಿಂದೆ ದಾವೋಸ್‌ನಲ್ಲಿ ನಡೆದ ಜಾಗತಿಕ ಆರ್ಥಿಕ ಸಮ್ಮೇಳನದಲ್ಲಿ ಅವರು ಪ್ರಧಾನಿ ಮೋದಿ ಜೊತೆ ಫೊಟೊಗೆ ಪೋಸ್ ನೀಡಿದ್ದಾರೆ. ನೀರವ್ ಮೋದಿ ಬಿಜೆಪಿಯ ಜೊತೆಗಾರನಾಗಿದ್ದು, ಪಕ್ಷಕ್ಕೆ ಆರ್ಥಿಕ ನೆರವು ನೀಡುತ್ತಿದ್ದರು ಎಂದು ಶಿವಸೇನೆ ತನ್ನ ಪತ್ರಿಕೆಯಲ್ಲಿ ಬರೆದುಕೊಂಡಿದೆ. ತಾನು ಬಿಜೆಪಿ ನಾಯಕರ ನೆರವಿನಿಂದ ನೀರವ್ ಮೋದಿ ದೇಶವನ್ನು ಲೂಟಿ ಮಾಡಿದರು ಎಂದು ಆರೋಪಿಸುವುದಿಲ್ಲ. ಆದರೆ ದೇಶದಲ್ಲಿ ಅನೇಕ ನೀರವ್ ಮೋದಿಗಳಿದ್ದು ಅವರು ಬಿಜೆಪಿಗೆ ಚುನಾವಣಾ ಸಮಯದಲ್ಲಿ ಆರ್ಥಿಕ ನೆರವು ನೀಡುತ್ತಾ ಬಂದಿದ್ದಾರೆ ಎಂದು ಸೇನೆ ಆರೋಪಿಸಿದೆ. ನಾನು ತಿನ್ನುವುದಿಲ್ಲ, ಇತರರನ್ನೂ ತಿನ್ನಲು ಬಿಡುವುದಿಲ್ಲ ಎಂದು ಚುನಾವಣೆಯ ಸಮಯದಲ್ಲಿ ಮೋದಿ ಮಾಡಿದ ಘೋಷಣೆ ಈ ಪ್ರಕರಣದಲ್ಲಿ ಸುಳ್ಳಾಗಿದೆ ಎಂದು ಸೇನೆ ತಿಳಿಸಿದೆ.

ನೀರವ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೂ ಆತ ದಾವೋಸ್‌ನಲ್ಲಿ ಪ್ರಧಾನಿ ಜೊತೆ ಫೋಟೊ ತೆಗೆಸಿಕೊಂಡಿದ್ದಾದರೂ ಹೇಗೆ ಎಂದು ಸೇನೆ ಪ್ರಶ್ನಿಸಿದೆ. ನೀರವ್ ದೇಶದಿಂದ ಪರಾರಿಯಾದ ನಂತರವಷ್ಟೇ ಜಾರಿ ನಿರ್ದೇಶನಾಲಯವು ಕಾರ್ಯಚರಣೆಗಿಳಿದು ಅವರ ಆಸ್ತಿಯನ್ನು ಜಪ್ತಿಯನ್ನು ಮಾಡಿದೆ ಎಂದು ಸೇನೆ ಆರೋಪಿಸಿದೆ. ಚಗನ್ ಬುಜ್ಬಲ್, ಲಾಲೂ ಪ್ರಸಾದ್‌ರಂಥ ರಾಜಕಾರಣಿಗಳು ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಆದರೆ ವಿಜಯ್ ಮಲ್ಯಾ, ನೀರವ್ ಮೋದಿಯಂಥವರು ಸರಕಾರಕ್ಕೆ ಚಳ್ಳೆಹಣ್ಣು ತಿನ್ನಿಸಿ ದೇಶದಿಂದ ಪರಾರಿಯಾಗಿದ್ದಾರೆ. ಭ್ರಷ್ಟಾಚಾರ ಮುಕ್ತ ಭಾರತ ಮತ್ತು ಪಾರದರ್ಶಕ ಭಾರತ ಮುಂತಾದ ಮಾತುಗಳು ಮೂರೇ ವರ್ಷಗಳಲ್ಲಿ ಅರ್ಥವಿಲ್ಲದಂತಾಗಿದೆ. ರೈತರು ತಮ್ಮ ಸಾವಿರ ಲೆಕ್ಕದಲ್ಲಿರುವ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಮಲ್ಯ, ಮೋದಿಯಂಥವರು ಕೋಟಿ ಲೆಕ್ಕದಲ್ಲಿ ಹಣ ವಂಚಿಸಿ ವಿದೇಶಗಳಲ್ಲಿ ಆರಾಮವಾಗಿದ್ದಾರೆ ಎಂದು ಸೇನೆ ಅಸಮಾಧಾನ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News