ತೈಲಕ್ಕೆ ಸಮಂಜಸವಾದ ದರ ನಿಗದಿ ಮಾಡುವಂತೆ ಸೌದಿಗೆ ಭಾರತ ಮನವಿ

Update: 2018-02-23 16:16 GMT

ಹೊಸದಿಲ್ಲಿ, ಫೆ.23: ಉತ್ಪದಾಕ ಮತ್ತು ಗ್ರಾಹಕ ರಾಷ್ಟ್ರಗಳ ಹಿತಾಸಕ್ತಿಯನ್ನು ಕಾಯುವಂತೆ, ತೈಲಕ್ಕೆ ಸಮಂಜಸವಾದ ದರವನ್ನು ನಿಗದಿ ಮಾಡುವಂತೆ ಜಗತ್ತಿನ ಅತ್ಯಂತ ದೊಡ್ಡ ತೈಲ ಉತ್ಪಾದಕ ರಾಷ್ಟ್ರವಾಗಿರುವ ಸೌದಿ ಅರೇಬಿಯಾಕ್ಕೆ ಭಾರತ ಮನವಿ ಮಾಡಿದೆ.

ಭಾರತ ಭೇಟಿಯಲ್ಲಿರುವ ಸೌದಿಯ ತೈಲ ಸಚಿವ ಖಾಲಿದ್ ಅಲ್ ಫಲಿಹ್ ಜೊತೆ ಮಾತುಕತೆ ನಡೆಸಿದ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರದಾನ್, ಭಾರತವು ದರ ಸೂಕ್ಷ್ಮ ದೇಶವಾಗಿದೆ. ಹಾಗಾಗಿ ಒಪೆಕ್ ರಾಷ್ಟ್ರದಿಂದ ಆಮದು ಮಾಡುವಂಥ ಕಚ್ಚಾತೈಲ ಮತ್ತು ಎಲ್‌ಪಿಜಿಗೆ ಸಮಂಜಸವಾದ ದರವನ್ನು ನಿಗದಿ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ. ನಾವು ನಿಗದಿ ಮಾಡುವ ದರವು ಉತ್ಪಾದಕ ರಾಷ್ಟ್ರಕ್ಕೆ ನಷ್ಟವನ್ನುಂಟು ಮಾಡಬಾರದು ಜೊತೆಗೆ ಗ್ರಾಹಕ ರಾಷ್ಟ್ರಗಳ ಹಿತಾಸಕ್ತಿಯನ್ನೂ ಕಾಯಬೇಕು ಎಂದು ಮಾತುಕತೆಯ ವೇಳೆ ತಿಳಿಸಿರುವುದಾಗಿ ಪ್ರದಾನ್ ನಂತರ ಮಾಧ್ಯಮಗಳಿಗೆ ವಿವರಿಸಿದ್ದಾರೆ.

ಭಾರತವು ಜಗತ್ತಿನ ಮೂರನೇ ಅತೀದೊಡ್ಡ ತೈಲ ಆಮದುದಾರ ದೇಶವಾಗಿದೆ. ದೇಶದ ಶೇ. 80 ತೈಲ ಅಗತ್ಯಕ್ಕಾಗಿ ಭಾರತ ವಿದೇಶವನ್ನು ಅವಲಂಬಿಸಿದೆ. ಆಮದು ಮಾಡಲಾಗುವ ಶೇ. 85 ತೈಲ ಮತ್ತು ಶೇ. 95 ಅನಿಲವು ಒಪೆಕ್ ರಾಷ್ಟ್ರಗಳಿಂದ ಬರುತ್ತದೆ. ಏಷ್ಯದ ಗ್ರಾಹಕ ದೇಶಗಳಿಗೆ ವಿಧಿಸಲಾಗುತ್ತಿರುವ ಪ್ರೀಮಿಯಂ ಶುಲ್ಕವನ್ನು ಸ್ಥಗಿತಗೊಳಿಸುವಂತೆ ಭಾರತವು ದಶಕಗಳಿಂದಲೂ ಪೆಟ್ರೋಲಿಯಂ ರಫ್ತುದಾರ ದೇಶಗಳ ಒಕ್ಕೂಟ (ಒಪೆಕ್) ಕ್ಕೆ ಮನವಿ ಮಾಡುತ್ತಲೇ ಬಂದಿದೆ. ಈ ವಿಷಯವನ್ನು ಮತ್ತೆ ಪ್ರಸ್ತಾಪಿಸಿದ ಪ್ರದಾನ್, ಪ್ರೀಮಿಯಂ ಶುಲ್ಕವನ್ನು ತೆಗೆದು ಹಾಕುವುದರಿಂದ ಸಾಮಾನ್ಯ ನಾಗರಿಕರಿಗೆ ಕಡಿಮೆ ದರದಲ್ಲಿ ಇಂಧನ ಸಿಗುವಂತಾಗುತ್ತದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News