ಕರ್ತವ್ಯ ನಿರ್ವಹಣೆಯ ಸಂದರ್ಭ ರಕ್ಷಣೆ: ಕೇಂದ್ರ ಸರಕಾರಕ್ಕೆ ಅಧಿಕಾರಿಗಳ ಮನವಿ

Update: 2018-02-23 16:20 GMT

ಹೊಸದಿಲ್ಲಿ, ಫೆ.23: ಮುಖ್ಯ ಕಾರ್ಯದರ್ಶಿಯ ಮೇಲೆ ಆಪ್ ಶಾಸಕರು ಹಲ್ಲೆ ನಡೆಸಿದ್ದಾರೆ ಎಂಬ ಪ್ರಕರಣದ ಹಿನ್ನೆಲೆಯಲ್ಲಿ, ಭಾರತೀಯ ಆಡಳಿತಾತ್ಮಕ ಸೇವೆ(ಐಎಎಸ್) ಅಧಿಕಾರಿಗಳ ನಿಯೋಗವೊಂದು ಕೇಂದ್ರ ಸಚಿವರನ್ನು ಭೇಟಿಯಾಗಿ, ಕರ್ತವ್ಯದ ಸಂದರ್ಭ ರಕ್ಷಣೆ ಖಾತರಿಪಡಿಸುವಂತೆ ಮನವಿ ಮಾಡಿಕೊಂಡಿದೆ. ಪ್ರಧಾನಮಂತ್ರಿ ಕಚೇರಿಯ ಸಹಾಯಕ ಸಚಿವ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಉಸ್ತುವಾರಿ ಸಚಿವ ಜಿತೇಂದ್ರ ಸಿಂಗ್‌ರನ್ನು ನಿಯೋಗ ಭೇಟಿ ಮಾಡಿದ್ದು, ನಿಯಮ ಪ್ರಕಾರ ಸಾಧ್ಯವಿರುವ ಎಲ್ಲಾ ಸಹಕಾರ ನೀಡುವುದಾಗಿ ಕೇಂದ್ರ ಸರಕಾರ ಭರವಸೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳಿಗೆ ಕೆಲಸ ಸ್ನೇಹಿ ವಾತಾವರಣ ರೂಪಿಸಿ, ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಅವರಿಂದ ಅತ್ಯುತ್ತಮ ನಿರ್ವಹಣೆ ಪಡೆಯಬೇಕಿದೆ ಎಂದು ಸಚಿವ ಜಿತೇಂದ್ರ ಸಿಂಗ್ ಅಧಿಕಾರಿಗಳ ನಿಯೋಗದ ಜೊತೆ ನಡೆಸಿದ ಸಭೆಯ ಬಳಿಕ ತಿಳಿಸಿದರು.

ಈ ಮಧ್ಯೆ ಮುಖ್ಯಮಂತ್ರಿ ಕೇಜ್ರೀವಾಲ್ ಕರೆದಿರುವ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸುಮಾರು 200 ಐಎಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮುಖ್ಯಮಂತ್ರಿ ಕ್ಷಮೆ ಯಾಚಿಸದ ಹೊರತು ಅವರೊಂದಿಗೆ ಪತ್ರ ಮುಖೇನ (ಸರಕಾರಿ ಕರ್ತವ್ಯದ ಕೆಲಸ) ವ್ಯವಹಾರ ಮಾತ್ರ ಮಾಡಲಾಗುವುದು . ನಾವು ಸರಕಾರಿ ಸಿಬ್ಬಂದಿಗಳು. ಯಾವುದೇ ಪಕ್ಷದ ಜೊತೆ ಸಂಯೋಜಿತರಾಗಿಲ್ಲ. ನಡೆದ ಘಟನೆಯಿಂದ ನೋವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಪ್ರತಿಭಟನೆ ಸೂಚಿಸುವ ಕ್ರಮವಾಗಿ, ನಿವೃತ್ತ ಐಎಎಸ್ ಅಧಿಕಾರಿ, ದಿಲ್ಲಿ ಶಿಕ್ಷಣ ಇಲಾಖೆಯ ಸಲಹೆಗಾರ ಧೀರ್ ಝಿಂಗರನ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹಿರಿಯ ಅಧಿಕಾರಿಗಳ ಜೊತೆ ಆಕ್ಷೇಪಾರ್ಹ ರೀತಿಯಲ್ಲಿ ನಡೆದುಕೊಳ್ಳುವ ಸರಕಾರದ ಜೊತೆ ಕಾರ್ಯ ನಿರ್ವಹಿಸಲು ಇಚ್ಛಿಸುವುದಿಲ್ಲ ಎಂದವರು ತಿಳಿಸಿದ್ದಾರೆ.

ಈ ಮಧ್ಯೆ, ನಿವೃತ್ತ ಅಧಿಕಾರಿ, ಕೇಜ್ರೀವಾಲ್ ಅವರ ಆಪ್ತ ಎನ್ನಲಾದ ವಿ.ಕೆ.ಜೈನ್ ಅವರು, ಆಪ್ ಶಾಸಕರು ಮುಖ್ಯಕಾರ್ಯದರ್ಶಿಯ ಮೇಲೆ ಹಲ್ಲೆ ನಡೆಸಿರುವುದನ್ನು ತಾನು ಕಂಡಿರುವುದಾಗಿ ಗುರುವಾರ ನ್ಯಾಯಾಲಯದೆದುರು ಹೇಳಿಕೆ ನೀಡುವ ಮೂಲಕ ಕೇಜ್ರೀವಾಲ್‌ಗೆ ಮುಜುಗರ ಉಂಟು ಮಾಡಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News