ಭಯೋತ್ಪಾದಕತೆ ನಿಗ್ರಹಕ್ಕೆ ಸಂಘಟಿತ ಪ್ರಯತ್ನ: ಭಾರತ- ಕೆನಡಾ ನಿರ್ಧಾರ

Update: 2018-02-23 16:30 GMT

ಹೊಸದಿಲ್ಲಿ, ಫೆ.23: ಭಾರತಕ್ಕೆ ಭೇಟಿ ನೀಡಿರುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊವ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬಳಿಕ ಉಭಯ ಮುಖಂಡರ ಉಪಸ್ಥಿತಿಯಲ್ಲಿ ಆರು ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಭಯೋತ್ಪಾದನೆ ನಿಗ್ರಹಕ್ಕೆ ಸಂಘಟಿತ ಪ್ರಯತ್ನ, ವ್ಯಾಪಾರ ಸಂಬಂಧ ಉತ್ತೇಜಿಸಲು ಕ್ರಮ ಕೈಗೊಳ್ಳುವುದು, ಇಂಧನ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಸೇರಿದಂತೆ ಆರು ಒಪ್ಪಂದಗಳಿಗೆ ಸಹಿ ಹಾಕಲಾಯಿತು.

 ಸಭೆಯ ಬಳಿಕ ಕೆನಡಾ ಪ್ರಧಾನಿಯೊಂದಿಗೆ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದ್ವಿಪಕ್ಷೀಯ ಸಹಭಾಗಿತ್ವದ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು .ಧರ್ಮವನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸುವವರಿಗೆ ಅವಕಾಶ ನೀಡಬಾರದು ಎಂದು ಉಭಯ ದೇಶಗಳೂ ನಿರ್ಧರಿಸಿವೆ ಎಂದು ಹೇಳಿದರು. ಅಲ್ಲದೆ ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆಗೆ ಸವಾಲೆಸೆಯುವವರನ್ನು ಸಹಿಸಲಾಗುವುದಿಲ್ಲ ಎಂದೂ ಮೋದಿ ಹೇಳಿದರು.

  ತಮ್ಮ ಭಾರತ ಪ್ರವಾಸದ ಸಂದರ್ಭ ದೇಶದ ವಿವಿಧ ಭಾಗಗಳಿಗೆ ಕೆನಡಾದ ಪ್ರಧಾನಿ ಭೇಟಿ ನೀಡಿರುವುದನ್ನು ಉಲ್ಲೇಖಿಸಿದ ಮೋದಿ, ದೇಶದಲ್ಲಿರುವ ವೈವಿಧ್ಯತೆಯನ್ನು ಅವರು ಗಮನಿಸಿರಬಹುದು ಎಂದರು.

ಬಳಿಕ ಮಾತನಾಡಿದ ಜಸ್ಟಿನ್ ಟ್ರೂಡೊ, ಭಾರತವು ವಾಣಿಜ್ಯಿಕ ಸಹಕಾರದಲ್ಲಿ ಸಹಜ, ಆಪ್ತ ಮಿತ್ರ ರಾಷ್ಟ್ರವಾಗಿದೆ ಎಂದು ಬಣ್ಣಿಸಿದರು. ಇದಕ್ಕೂ ಮುನ್ನ ಟ್ರೂಡೊ ಜತೆ ಸಭೆ ನಡೆಸಿದ್ದ ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್, ಉಭಯ ದೇಶಗಳ ಹಿತಾಸಕ್ತಿಗೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಚರ್ಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News